ನವದೆಹಲಿ: ವಯನಾಡು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ (Wayanad ByElection) ಮತ ಎಣಿಕೆ ಭರದಿಂದ ಸಾಗುತ್ತಿದ್ದು, ಕ್ಷೇತ್ರದ ಜನರಲ್ಲಿ ಕುತೂಹಲ ಗರಿಗೆದರಿದೆ. ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಅಭ್ಯರ್ಥಿ ಸತ್ಯನ್ ಮೊಕೇರಿ ಮತ್ತು ಎನ್ಡಿಎ ಅಭ್ಯರ್ಥಿ ನವ್ಯಾ ಹರಿದಾಸ್ ವಿರುದ್ಧ ಭರ್ಜರಿ ಪೈಪೋಟಿಗೆ ಇಳಿದಿರುವ ಪ್ರಿಯಾಂಕಾ, ಇದೀಗ ಭಾರೀ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಸಹೋದರ ರಾಹುಲ್ ಗಾಂಧಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟ ಬೆನ್ನಲ್ಲೇ ತಮ್ಮ ಚೊಚ್ಚಲ ಪೈಪೋಟಿಯನ್ನು ವಯನಾಡಿನಿಂದ ಆರಂಭಿಸಿದ ವಾದ್ರಾಗೆ ಸದ್ಯ ಗೆಲುವಿನ ಸಿಹಿ ಕಾಣುವ ಮುನ್ಸೂಚನೆ ಲಭಿಸಿದೆ.
ಪ್ರಸ್ತುತ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದ್ದು, 1,48,554 ಮತಗಳನ್ನು ಪ್ರಿಯಾಂಕಾ ಪಡೆದುಕೊಂಡಿದ್ದಾರೆ. ಈ ಪೈಕಿ 86,000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿರುವುದು ಗಮನಾರ್ಹ. ಅತ್ತ ವಯನಾಡು ಜನತೆ ಬಳಿ ಪ್ರಿಯಾಂಕಾ ಮಾಡಿಕೊಂಡಿದ್ದ ಮನವಿ ಫಲಿಸುವ ಲಕ್ಷಣಗಳು ಕಾಣಿಸುತ್ತಿದ್ದು, ಕೈ ನಾಯಕಿಗೆ ಗೆಲುವು ಸನ್ನಿಹಿತ ಎಂದೇ ಹೇಳಬಹುದು.