ಬೆಂಗಳೂರು: ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿ, ಚಿತ್ರರಸಿಕರಿಂದ ಸೈಎನಿಸಿಕೊಂಡ ನಟಿ ಪ್ರಿಯಾಂಕಾ ಮೋಹನ್, ಸದ್ಯ ಮುಂಬರುವ ಚಿತ್ರಗಳ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾದ ಪ್ರಿಯಾಂಕಾ, ತಾನು ಕೋಟಿ ರೂ. ಕೊಟ್ಟರೂ ಬೆಡ್ರೂಂ ಸೀನ್ ಅಥವಾ ಲಿಪ್ಲಾಕ್ ಸೀನ್ಗಳನ್ನು ಮಾಡುವುದಿಲ್ಲ ಎಂದು ನೇರವಾಗಿ ಹೇಳಿದರು. ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿ, ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತು.
ತನ್ನ ಸರಳ ಪಾತ್ರಗಳಿಂದಲೇ ಸಿನಿರಸಿಕರ ಮನಗೆದ್ದಿರುವ ಪ್ರಿಯಾಂಕಾ, 2021ರಲ್ಲಿ ನಟ ಶಿವಕಾರ್ತಿಕೆಯನ್ ಅಭಿನಯದ ಡಾಕ್ಟರ್ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ಮಿಂಚಿದ ನಟಿ, ಕಳೆದ ನಾಲ್ಕು ದಿನಗಳ ಹಿಂದೆ 'ಟಿಕ್ ಟಾಕ್' ಚಿತ್ರದ ನಿರ್ಮಾಪಕರ ಆರೋಪಕ್ಕೆ ಸಿಲುಕಿ ಸುದ್ದಿಯಾದರು.
ಚಿತ್ರದಲ್ಲಿ ಪ್ರಿಯಾಂಕಾ ಮೋಹನ್ ಅಭಿನಯದ 20 ನಿಮಿಷಗಳ ದೃಶ್ಯಗಳನ್ನು ಬಿಡುಗಡೆ ಸಮಯದಲ್ಲಿ ಡಿಲೀಟ್ ಮಾಡಲಾಗಿದೆ ಎಂದು ಹೇಳಿದ ನಿರ್ಮಾಪಕರು, ಇದರಿಂದ ತನಗೆ ಕೋಟ್ಯಂತರ ರೂಪಾಯಿ ನಷ್ಟವನ್ನು ಅನುಭವಿಸುವಂತಾಯಿತು ಎಂದು ಆರೋಪಿಸಿ ಚೆನ್ನೈನಲ್ಲಿ ದೂರು ದಾಖಲಿಸಿದ್ದರು. ಈ ವಿವಾದದ ಬೆನ್ನಲ್ಲೇ ಪ್ರಿಯಾಂಕಾ ಕೊಟ್ಟ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಯಿತು. ಇದೀಗ ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿಗೆ ಕನ್ನಡ ಚಿತ್ರರಂಗದ ಯಾವ ನಟರೊಂದಿಗೆ ಅಭಿನಯಿಸಲು ಇಚ್ಚಿಸುತ್ತೀರಾ? ಎಂದು ಕೇಳಲಾಯಿತು. ಈ ಪ್ರಶ್ನೆಗೆ ನಟಿ ಕೊಟ್ಟ ಉತ್ತರ ಹೀಗಿದೆ.
ನನಗೆ ಅವಕಾಶ ಸಿಕ್ಕರೇ ರಾಕಿಂಗ್ ಸ್ಟಾರ್ ಯಶ್ ಮತ್ತು ರಕ್ಷಿತ್ ಶೆಟ್ಟಿ ಅವರೊಂದಿಗೆ ಅಭಿನಯಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಪ್ರಿಯಾಂಕಾ ಅವರ ಈ ಹೇಳಿಕೆಗೆ ಅಭಿಮಾನಿಗಳು ಮೆಚ್ಚಿದ್ದು, ಒಂದೊಳ್ಳೆ ಸಿನಿಮಾ ಮಾಡುವ ಅವಕಾಶ ಶೀಘ್ರವೇ ಕೂಡಿಬರಲಿ ಎಂದು ಹಾರೈಸಿದ್ದಾರೆ.