ನವದೆಹಲಿ: ತಮಗೆ ಕೊಟ್ಟಿದ್ದ ಎಸ್ಪಿಜಿ ಭದ್ರತೆಯನ್ನು Z+ ಭದ್ರತೆಗೆ ಇಳಿಸಿರುವುದರಿಂದ, ನವದೆಹಲಿಯ ಲೋಧಿ ರಸ್ತೆಯಲ್ಲಿ ತಮಗೆ ಕೊಡಲಾಗಿರುವ ಲುಟಯೆನ್ಸ್ ಬಂಗ್ಲೆಯನ್ನು ತೆರವುಗೊಳಿಸಿ ಎಂದು ಕೇಂದ್ರ ಸರ್ಕಾರ ನೋಟಿಸ್ ಕೊಟ್ಟ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬಾಕಿವುಳಿಸಿಕೊಂಡಿದ್ದ ಬಂಗ್ಲೆಯ ಬಾಡಿಗೆ ಮತ್ತಿತರ ಖರ್ಚುವೆಚ್ಚಗಳನ್ನು ಪಾವತಿಸಿದ್ದಾರೆ.
ಇದಕ್ಕೂ ಮುನ್ನ ಬಾಡಿಗೆ ಮತ್ತಿತರ ಖರ್ಚುವೆಚ್ಚಗಳು ಸೇರಿ ಒಟ್ಟು 3.46 ಲಕ್ಷ ರೂಪಾಯಿ ಬಾಕಿ ಇದೆ. ಆಗಸ್ಟ್ 1ರೊಳಗೆ ಬಂಗ್ಲೆಯನ್ನು ತೆರವುಗೊಳಿಸುವ ಮುನ್ನ ಬಾಕಿಯನ್ನು ಚುಕ್ತಾ ಮಾಡುವಂತೆ ನೋಟಿಸ್ನಲ್ಲಿ ತಿಳಿಸಲಾಗಿತ್ತು.
ಪ್ರಿಯಾಂಕಾ ಅವರಿಗೆ ಒದಗಿಸಲಾಗಿದ್ದ ವೈಯಕ್ತಿಕ ಭದ್ರತೆಯನ್ನು Z+ ದರ್ಜೆಗೆ ಇಳಿಸಿ, ದೇಶಾದ್ಯಂತ ಸಿಆರ್ಪಿಎಫ್ ಯೋಧರ ಭದ್ರತೆಯನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ಅವರು 6B ಮಾದರಿಯ ಲುಟಯೆನ್ಸ್ ಬಂಗ್ಲೆಯನ್ನು ಪಡೆದುಕೊಳ್ಳಲು ಅವರು ಅರ್ಹರಿಲ್ಲ. ಹಾಗಾಗಿ ಸರ್ಕಾರಿ ಬಂಗ್ಲೆಯನ್ನು ತೆರವುಗೊಳಿಸುವಂತೆ ಸೂಚಿಸಿರುವುದಾಗಿ ಕೇಂದ್ರ ವಸತಿ ಮತ್ತು ನಗರಾಡಳಿತ ವ್ಯವಹಾರಗಳ ಸಚಿವಾಲಯ ಹೇಳಿತ್ತು.
ನೋಟಿಸ್ ಅನ್ವಯ ಪ್ರಿಯಾಂಕಾ ಗಾಂಧಿ ವಾದ್ರಾ ಲುಟಯೆನ್ಸ್ ಬಂಗ್ಲೆಯನ್ನು ಆಗಸ್ಟ್ 1ರೊಳಗೆ ತೆರವುಗೊಳಿಸದಿದ್ದರೆ ಅವರು ನಿಯಮಾನುಸಾರ ಜುಲ್ಮಾನೆ ರೂಪದಲ್ಲಿ ಹೆಚ್ಚುವರಿ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ.