Priyanka Chopra - Angelina Jolie :
ಆಸ್ಕರ್ ಪ್ರಶಸ್ತಿ ವಿಜೇತ ‘ಗರ್ಲ್ ಇಂಟರಪ್ಟಡ್’ ಖ್ಯಾತಿಯ ಹಾಲಿವುಡ್ ನಟಿ ಏಂಜಲೀನಾ ಜೋಲಿ ಸುದೀರ್ಘ 44 ವರ್ಷಗಳ ಕರಿಯರ್‌ನಲ್ಲಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಜತೆಗೆ ನಿರ್ದೇಶಕಿ, ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇಂತಹ ಏಂಜಲೀನಾ ವಿಶ್ವಾದ್ಯಂತ ಹಲವು ನಟ, ನಟಿಯರಿಗೆ ಸ್ಪೂರ್ತಿಯೂ ಹೌದು. ಅವರಿಂದ ಪ್ರೇರೇಪಿತರಾದವರಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಕೂಡ ಒಬ್ಬರು. ಕೆಲ ವರ್ಷಗಳಿಂದ ಹಾಲಿವುಡ್‌ನಲ್ಲಿ ಬಿಜಿಯಾಗಿದ್ದ ಅವರು, ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ಜತೆ ‘ವಾರಣಾಸಿ’ ಮೂಲಕ ಏಳು ವರ್ಷಗಳ ನಂತರ ಮತ್ತೆ ಭಾರತಕ್ಕೆ ವಾಪಸ್ಸಾಗಿದ್ದಾರೆ. ಜತೆಗೆ ‘ಅಮ್ರಿ’, ‘ಜಡ್ಜ್‌ಮೆಂಟ್ ಡೇ’ ಎಂಬ ಇಂಗ್ಲೀಷ್ ಸಿನಿಮಾಗಳಲ್ಲೂ ಪ್ರಿಯಾಂಕಾ ನಟಿಸುತ್ತಿದ್ದಾರೆ. ಹಾಗೇ ಏಂಜಲೀನಾ ಜೋಲಿ ಜತೆಗೂ ಹೊಸ ಪ್ರಾಜೆಕ್ಟ್‌ನಲ್ಲಿ ನಟಿಸಲಿರುವ ಬಗ್ಗೆ ಖುದ್ದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ. ‘ನಾನು ಪೆನೆಲೊಪಿ ಕ್ರೂಜ್, ಸಲ್ಮಾ ಹಾಯೆಕ್ ಮತ್ತು ಏಂಜಲೀನಾ ಜೋಲಿಯಂತಹ ನಟಿಯರಿಂದ ಸ್ಪೂರ್ತಿ ಪಡೆಯುತ್ತೇನೆ. ಸದ್ಯ ಹೊಸ ಪ್ರಾಜೆಕ್ಟ್‌ನಲ್ಲಿ ಏಂಜಲೀನಾ ಜತೆ ನಟಿಸಲು ಸಿದ್ಧತೆ ನಡೆಸುತ್ತಿದ್ದೇನೆ’ ಎಂದಷ್ಟೇ ಹೇಳಿಕೊಂಡಿರುವ ಪ್ರಿಯಾಂಕಾ, ತಾರಾಗಣ, ಶೀರ್ಷಿಕೆ ಸೇರಿ ಉಳಿದ ಯಾವ ಮಾಹಿತಿಯನ್ನೂ ನೀಡಿಲ್ಲ. ಜತೆಗೆ ಹಾಲಿವುಡ್‌ಗೆ ಪದಾರ್ಪಣೆ ಮಾಡಿದ ಸಮಯದಲ್ಲಿ ಅವರಿಗಾಗಿ ಯಾರೂ ಕಥೆ, ಪಾತ್ರ ಬರೆಯುತ್ತಿರಲಿಲ್ಲವಂತೆ. ಆದರೆ, ‘ಸಿಕ್ಕ ಅವಕಾಶಗಳನ್ನೇ ಚೆನ್ನಾಗಿ ಬಳಸಿಕೊಂಡಿದ್ದೇನೆ. ಹೀಗಾಗಿ ಈಗ ನನಗಾಗಿ ಕಥೆ, ಪಾತ್ರ ಬರೆಯುತ್ತಿದ್ದಾರೆ. ಈಗ ನಾನು ನನಗೆ ಬೇಕಾದ ಕಥೆ, ಪಾತ್ರ ಆಯ್ಕೆ ಮಾಡಿಕೊಳ್ಳಬಲ್ಲೆ. ಇಲ್ಲವೇ ನಾನೇ ನನಗೆ ಬೇಕಾದ ರೀತಿ ಕಥೆ, ಸೃಷ್ಟಿಸಿಕೊಳ್ಳುವ ಹಂತದಲ್ಲಿದ್ದೇನೆ’ ಎಂದಿದ್ದಾರೆ.