ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ ನಿಜಾಮನೂ ಅಲ್ಲ, ಅವರ ಅನುಯಾಯಿಗಳು ರಜಾಕಾರರೂ ಅಲ್ಲ. ಖರ್ಗೆ ಕುಟುಂಬಕ್ಕೆ ಡಾ.ಅಂಬೇಡ್ಕರ್ ಸಂವಿಧಾನ ಅನ್ವಯಿಸುವುದಿಲ್ಲವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಕಾರಣ. ಊರಿಗೆಲ್ಲಾ ಉಪದೇಶ ಮಾಡುವ ಪ್ರಿಯಾಂಕ್ ಖರ್ಗೆ ಮೊದಲು ರಾಜೀನಾಮೆ ಕೊಟ್ಟು ನೈತಿಕತೆ ಪ್ರದರ್ಶನ ಮಾಡಲಿ ಎಂದು ಆಗ್ರಹಿಸಿದ್ದಾರೆ.
ಗುತ್ತಿಗೆದಾರ ಸಚಿನ್ ಸಾವಿನಲ್ಲಿ ಸಚಿವ ಪ್ರಿಯಾಂಕ್‌ಖರ್ಗೆ ಆಪ್ತರ ಪಾತ್ರವಿರುವುದು ಸ್ಪಷ್ಟವಾಗಿದೆ. ಈ ಹಿಂದೆ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಾಗ, ಸಚಿವ ಈಶ್ವರಪ್ಪನವರ ರಾಜೀನಾಮೆ ಕೇಳಲಾಗಿತ್ತು. ಈಗ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಆರ್.ಅಶೋಕ್ ಪುನರುಚ್ಚರಿಸಿದ್ದಾರೆ.
ಸಚಿನ್ ಪಾಂಚಾಳ ಅವರ ಡೆತ್ ನೋಟ್‌ನಲ್ಲಿ ರಾಜು ಕಪನೂರು ಹೆಸರು ಬರೆದಿಟ್ಟು, ಬಳಿಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಂಚನೆ ಹಾಗೂ ಹಣಕ್ಕಾಗಿ ಕೊಲೆ ಬೆದರಿಕೆ ಆರೋಪ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸಚಿನ್ ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದನ್ನು ಗಮನಿಸಿದ ಕುಟುಂಬಸ್ಥರು ಆತಂಕಗೊಂಡು, ಬೀದರ್‌ನ ಗಾಂಧಿಗಂಜ್ ಪೊಲೀಸ್ ಠಾಣೆಗೆ ಮನವಿ ಮಾಡಿದ್ದರು. ಆದರೆ ದೂರು ದಾಖಲಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೂರಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆ ಸದಸ್ಯನೂ ಆಗಿದ್ದ ರಾಜು ಕಪನೂರ್, ಈ ಹಿಂದೆ ಅಕ್ರಮ ಪಿಸ್ತೂಲ್ ಹೊಂದಿರುವ ಆರೋಪದಲ್ಲಿ ಬಂಧಿತನಾಗಿದ್ದ. ಸಚಿನ್ ಡೆತ್‌ನೋಟ್‌ನಿಂದ ರಾಜು ಕಪನೂರು ಮತ್ತು ಗ್ಯಾಂಗ್‌ನ ಇನ್ನೊಂದು ಮುಖಬಯಲಾಗಿದೆ.
ಇವೆಲ್ಲ ಗೊತ್ತಿದ್ದರೂ ಸಚಿವ ಪ್ರಿಯಾಂಕ್ ಖರ್ಗೆ ಆಪ್ತರಿಂದ ದೂರವಾಗಿಲ್ಲ. ಇಂತಹ ಗೂಂಡಾಗಳು ಸಚಿವರ ಆಪ್ತ ಎಂದರೆ ರಾಜ್ಯದಲ್ಲಿ ಗೂಂಡಾಗಳ, ರೌಡಿಗಳ ಸರ್ಕಾರ ನಡೆಯುತ್ತಿದೆ ಎಂದರ್ಥ ಎಂದು ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಕ್ಷಕ ಅಪ್ಪ, ತಜ್ಞ ಮಗ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಜಾಪ್ರಭುತ್ವ ರಕ್ಷಣೆಗೆ ದೆಹಲಿಯಲ್ಲಿ ಬಿಡುವಿಲ್ಲದೆ ತೊಡಗಿಕೊಂಡಿದ್ದರೆ ಅವರ ಬೆನ್ನಹಿಂದೆ ರಿಪಬ್ಲಿಕ್ ಆ್ ಕಲಬುರಗಿಯಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿಲ್ಲವೆಂದು ರಾಜ್ಯಸಭಾ ಸದಸ್ಯ ಲಹರ್‌ಸಿಂಗ್ ಸಿರೋಯ ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಸಂವಿಧಾನ ತಜ್ಞರಂತೆ ವರ್ತಿಸುತ್ತಿರುವ ಖರ್ಗೆಯವರ ಪುತ್ರ ನಿವೇಶನ ವಿವಾದದ ನಂತರ ಮತ್ತೊಂದು ತಾಪತ್ರಯಕ್ಕೆ ಸಿಲುಕಿದ್ದಾರೆ.
ಕೆಐಎಡಿಬಿ ಐದು ಎಕರೆ ಜಮೀನಿನ ವಿವಾದ ಮರೆಯಾಗುವ ಮುನ್ನ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಆಪ್ತರ ಹೆಸರು ಕೇಳಿ ಬಂದಿದೆ. ಪ್ರಜಾಪ್ರಭುತ್ವ ರಕ್ಷಣೆಗೆ ಓಡಾಟ ನಡೆಸಿರುವ ಖರ್ಗೆಯವರು ತವರು ಜಿಲ್ಲೆ, ಕುಟುಂಬ ಸದಸ್ಯರ ವರ್ತನೆ ಕಡೆಗೂ ಗಮನ ನೀಡಲಿ ಎಂದು ಲಹರ್ ಸಿಂಗ್ ಸಲಹೆ ನೀಡಿದ್ದಾರೆ.