ನ್ಯೂಸ್

ನಿಷ್ಠೆ ಸಾಬೀತಿಗೆ ಪ್ರಿಯಾಂಕ್ ಖರ್ಗೆ ಪ್ರಯತ್ನ: ಲಹರ್ ಸಿಂಗ್ ಲೇವಡಿ | RSS restriction letter

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅಥವಾ ಡಾ.ಪರಮೇಶ್ವರ ಅವರಿಗಿಂತ ರಾಹುಲ್ ಗಾಂಧಿಯವರ ಆಲೋಚನೆಗಳಿಗೆ ಹೆಚ್ಚು ನಿಷ್ಠಾವಂತ ಎಂದು ಸಾಬೀತುಪಡಿಸಲು ಸಚಿವ ಪ್ರಿಯಾಂಕ್ ಖರ್ಗೆ ಆರ್‌.ಎಸ್‌.ಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದುಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ಲೇವಡಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಹೆಚ್ಚುವರಿ ಸೈದ್ಧಾಂತಿಕ ನಿಷ್ಠೆಗೆ ಪ್ರತಿಫಲವಾಗಿ ಸಿದ್ದರಾಮಯ್ಯನವರು ಕೆಳಗಿಳಿದ ನಂತರ ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಮಾಡುತ್ತದೆ ಎನ್ನುವ ನಿರೀಕ್ಷೆ ಪ್ರಿಯಾಂಕ್ ಖರ್ಗೆಗೆ ಇರುವಂತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಕರ್ನಾಟಕದ ರಾಜಕೀಯ ವಲಯದಲ್ಲಿ ಅಧಿಕಾರ ಹಸ್ತಾಂತರ ಕುರಿತಂತೆ ಮಾತುಗಳು ಜೋರಾಗಿ ಕೇಳಿ ಬರುತ್ತಿರುವಾಗ, ಪ್ರಿಯಾಂಕ್ ಖರ್ಗೆಯವರು ಆರ್ ಎಸ್ ಎಸ್ ಗೆ ನಿರ್ಬಂಧ ವಿಷಯ ಪ್ರಸ್ತಾಪಿಸಿ ಸಿಎಂಗೆ ಪತ್ರ ಬರೆಯುವ ಜತೆಗೆ ನಿರಂತರವಾಗಿ ಹೇಳಿಕೆ ನೀಡುತ್ತಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಏನು ಇಷ್ಟವಾಗುತ್ತದೆ ಎನ್ನುವುದು ಅವರಿಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ ಎಂದು ಲಹರ್ ಸಿಂಗ್ ಸಿರೋಯಾ ಛೇಡಿಸಿದ್ದಾರೆ.

ಪ್ರತಿಫಲದ ನಿರೀಕ್ಷೆ

ಕರ್ನಾಟಕ ರಾಜಕೀಯದಲ್ಲಿ ಸುದೀರ್ಘ ಕಾಲದಿಂದ ಇದ್ದರೂ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಕುರ್ಚಿ ಸಿಕಿಲ್ಲ. ಕನಿಷ್ಠ, ಅವರ ಮಗನಿಗಾದರೂ ನಷ್ಟ ಪರಿಹಾರ ನೀಡಬೇಕು. ಕಾಂಗ್ರೆಸ್‌ನಂತಹ ವಂಶರಾಜಕಾರಣದ ಪಕ್ಷದಲ್ಲಿ ಅದು ಬಹಳ ಸೂಕ್ತ ನಿರೀಕ್ಷೆಯೂ ಆಗಿದೆ.

ಅಲ್ಲದೆ, ಮುಖ್ಯಮಂತ್ರಿಯಾಗಲು ಪ್ರಯತ್ನಿಸಿದರೆ, ಕನಿಷ್ಠ ಉಪಮುಖ್ಯಮಂತ್ರಿಯಾದರೂ ಆಗಬಹುದು ಎನ್ನುವುದು ಪ್ರಿಯಾಂಕ್ ಖರ್ಗೆಯವರಿಗೆ ತಿಳಿದಿರಬಹುದು ಎಂದು ಲಹರ್ ಸಿಂಗ್ ಸಿರೋಯ ಕಾಲೆಳೆದಿದ್ದಾರೆ.