ನ್ಯೂಸ್

ಖಾಸಗಿ ಶಾಲೆಗಳ ತೇಜೋವಧೆ ಆರೋಪ: ಸಿಎಂ ಗೆ ಕ್ಯಾಮ್ಸ್ ಪತ್ರ

ಬೆಂಗಳೂರು ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸೇವೆಯ ಬಗ್ಗೆ ಕೆಟ್ಟದಾಗಿ ಬಿಂಬಿಸಿ, ತೇಜೋವಧೆ ಮಾಡುವ ಹೇಳಿಕೆಗಳನ್ನು ಕೆಲ ಬುದ್ದಿಜೀವಿಗಳು ನೀಡುತ್ತಿದ್ದಾರೆ. ಈ ಬಗ್ಗೆ ತಮ್ಮನ್ನು ಭೇಟಿಯಾಗಿ ಸ್ಪಷ್ಟನೆ ನೀಡಲು ಅವಕಾಶ ನೀಡುವಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟವು (ಕ್ಯಾಮ್ಸ್) ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ.

ರಾಜ್ಯಾದ್ಯಂತ ಶೇ. 95 ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ವಾರ್ಷಿಕ 40 ಸಾವಿರ ರೂ.ಗಳಿಗಿಂತ ಕಡಿಮೆ ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಪಟ್ಟಣಗಳಲ್ಲಿ ಶೇ. 83 ಮಕ್ಕಳು ಮತ್ತು ರಾಜ್ಯಾದ್ಯಂತ ಒಟ್ಟಾರೆ ಶೇ.55 ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೆಲ ಬೆರಳೆಣಿಕೆ (ಶೇ.2- 3) ಶಾಲೆಗಳು ಹೆಚ್ಚು ಶುಲ್ಕ ಪಡೆಯುತ್ತಿದ್ದರೂ ಸಹ ಅಂತಹ ಶಾಲೆಗಳಿಗೆ ತಮ್ಮ ಮಕ್ಕಳನ್ನು ಪಾಲಕರು ಒಪ್ಪಿ ಸೇರಿಸುತ್ತಿದ್ದಾರೆ. ಆದರೆ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಅನುಭವ ಇಲ್ಲದೆ ಇದ್ದರೂ ಶಿಕ್ಷಣ ತಜ್ಞರು ಎಂದು ಸ್ವಯಂ ಪ್ರೇರಿತವಾಗಿ ಹೇಳಿಕೊಂಡು ತೇಜೋವಧೆ ಮಾಡುವ ರೀತಿಯಲ್ಲಿ ಆಗಿಂದಾಗ್ಗೆ ಹೇಳಿಕೆಗಳನ್ನು ನೀಡಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.