ನವದೆಹಲಿ: ಲಾಕ್ಡೌನ್ ನಂತರ ವಿಮಾನಗಳು ಹಾರಾಟ ಆರಂಭಿಸಿವೆ. ಇದರ ಬೆನ್ನಲ್ಲೇ ಸುಮಾರು ಎರಡು ತಿಂಗಳ ನಷ್ಟವನ್ನು ಭರಿಸಿಕೊಳ್ಳುವ ಸಂಬಂಧ ವಿಮಾನಗಳು ಟಿಕೆಟ್ ದರವನ್ನು ಹೆಚ್ಚು ಮಾಡಿವೆ.
ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಕೆಲವು ಖಾಸಗಿ ಜೆಟ್ ವಿಮಾನಗಳು ಸಾಕುಪ್ರಾಣಿಗಳನ್ನು ವಿಮಾನದಲ್ಲಿ ಕರೆತರಲು ಅನುಮತಿಯನ್ನೂ ನೀಡಿವೆ. ಇದರಿಂದ ಅನೇಕ ಪ್ರಾಣಿ ಪ್ರಿಯರು ತುಂಬಾ ಖುಷಿಯಾಗಿದ್ದರು. ಆದರೆ ಅವರಿಗೆ ಆಘಾತವಾಗುವಂಥ ವಿಷಯ ಇದೀಗ ಬೆಳಕಿಗೆ ಬಂದಿದೆ. ಅದೇನೆಂದರೆ ಜೆಟ್ ವಿಮಾನಗಳು ಸಾಕುಪ್ರಾಣಿಗಳನ್ನು ದೆಹಲಿಯಿಂದ ಮುಂಬೈಗೆ ಕರೆತರಲು ಪ್ರತಿ ಸೀಟಿನ ಟಿಕೆಟ್ ದರವನ್ನು 1.6 ಲಕ್ಷ ರೂ.ನಿಗದಿ ಮಾಡಿವೆ!
ಇದನ್ನೂ ಓದಿ: ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಸಾವು
ಪ್ರಯಾಣಿಕರೊಬ್ಬರು ತಮ್ಮ ಸಂಬಂಧಿಕರಿಗೆ ಮುಂಬೈಗೆ ಪ್ರಯಾಣಿಸಲು ಖಾಸಗಿ ಜೆಟ್ ವ್ಯವಸ್ಥೆ ಮಾಡುತ್ತಿದ್ದಾಗ ಈ ವಿಚಾರ ಗಮನಕ್ಕೆ ಬಂದಿದೆ ಎಂದು ತಿಳಿದು ಬಂದಿದೆ ಎಂದು ಮುಂಬೈನ ಮಾಧ್ಯಮಗಳು ವರದಿ ಮಾಡಿವೆ.
ಕೆಲವು ವಿಮಾನಗಳು ತಮ್ಮ ನಾಯಿಯನ್ನು ವಿಮಾನದಲ್ಲಿ ಬಿಡದ ಹಿನ್ನೆಲೆಯಲ್ಲಿ, ಅವರು ಖಾಸಗಿ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಆಗ ಸಾಕುಪ್ರಾಣಿಗಳಿಗೆ ವಿಮಾನ ನೀಡಲು ಖಾಸಗಿ ಜೆಟ್ನವರು ಒಪ್ಪಿದರು. ಆದರೆ ಬೆಲೆ ಮಾತ್ರ 1.6 ಲಕ್ಷ ರೂಪಾಯಿ ಎಂದು ಹೇಳಿದರು. ಬೇರೆ ವಿಧಿಯಿಲ್ಲದೇ ನಾನು ಸಾಕು ನಾಯಿ ತರಲು ಟಿಕೆಟ್ ಬುಕ್ ಮಾಡಿಸಿದ್ದೇನೆ. ನನ್ನಂತೆಯೇ ಇನ್ನೂ ನಾಲ್ವರು ಪ್ರಯಾಣಿಕರು ತಮ್ಮ ಸಾಕುಪ್ರಾಣಿಗಳನ್ನು ದೆಹಲಿಯಿಂದ ಮುಂಬೈಗೆ ತರಲು ಒಪ್ಪಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಸದ್ಯ ಈ ಪ್ರಯಾಣಿಕರನ್ನು ಯಾವ ವಿಮಾನದಲ್ಲಿ ಕಳುಹಿಸಲಾಗುತ್ತದೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಟರ್ಬೊ-ಪ್ರಾಪ್ ವಿಮಾನದಲ್ಲಿ ಕಳುಹಿಸಲು ತಯಾರಿ ನಡೆಸಲಾಗಿದೆ. ಕರೊನಾ ವೈರಸ್ ತಡೆಗಟ್ಟಲು ಕಂಪನಿಯು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಿದೆ. ಪ್ರಾಣಿಗಳನ್ನು ಪಂಜರಗಳಲ್ಲಿ ಇರಿಸಲಾಗುತ್ತದೆ ಎಂದು ವಿಮಾನಯಾನ ಸಂಸ್ಥೆಯವರು ಉಲ್ಲೇಖಿಸಿದ್ದಾರೆ.
ಸಾಕುಪ್ರಾಣಿಗಳು ವಿಮಾನವನ್ನು ಹತ್ತುವ ಮೊದಲು ತಾಪಮಾನ ತಪಾಸಣೆಗೊಳಪಡಿಸಲಾಗುತ್ತದೆ. ಮತ್ತು ಅವುಗಳ ನಿರ್ವಹಣಾಕಾರರು ಸಹ ಜತೆಗೆ ಹೋಗುತ್ತಾರೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)