ಚೌಕಸಂದ್ರ ಜಯರಾಮ ನಾಯಕ್ ಹಾರೋಹಳ್ಳಿ
ಕೆಲವರಿಗೆ ನಾವು ಏನೇ ಕೆಲಸ ಮಾಡುತ್ತಿದ್ದರೂ ಅದರೊಂದಿಗೆ ವ್ಯವಸಾಯ ಮಾಡಬೇಕೆನ್ನುವ ಹಂಬಲವಿರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಪುರದೊಡ್ಡಿ ಗ್ರಾಮದ ರೈತರೊಬ್ಬರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡೇ ಕೃಷಿಯಲ್ಲಿ ಯಶೋಗಾಥೆ ಬರೆದಿದ್ದಾರೆ.
ರೈತ ಹಾಗೂ ಖಾಸಗಿ ಉದ್ಯೋಗಿ ಕೆ.ಪ್ರಶಾಂತ್ ಈ ವೀಶೇಷ ಸಾಧನೆ ಮಾಡಿದ್ದು, ಕೃಷಿ ಭೂಮಿಯಲ್ಲಿ ಹಲವು ಬೆಳೆಗಳನ್ನು ಬೆಳೆಯುವ ಮೂಲಕ ತಂದೆ ಕೆಂಪೇಗೌಡರ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಕೆ.ಪ್ರಶಾಂತ್, ಕೆಲಸ ಮುಗಿದ ನಂತರ ಪ್ರತಿ ದಿನ ಸಂಜೆ ವೇಳೆ ತೋಟದ ಕೆಲಸಕ್ಕೆ ಹಾಜರಿ ಹಾಕುವುದನ್ನು ರೂಢಿಸಿಕೊಂಡಿದ್ದು, ನಂಬಿದ ಮಣ್ಣಿನಲ್ಲಿ ನಿತ್ಯ ಏನಾದರೂ ಕೆಲಸ ಮಾಡಿಯೇ ಮನೆಗೆ ಹೋಗುತ್ತಾರೆ.
ತೋಟದಲ್ಲಿ ಬಾಳೆ, ತೆಂಗು, ಸಪೋಟ, ಹಲಸು, ಚೇಪೆ, ಮಾವು ಸೇರಿ ಹಲವು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸುಮಾರು 2,200 ಗುಳಿ ಬಾಳೆ ಹಾಕಿದ್ದಾರೆ. ಎಲ್ಲ ಸಂದರ್ಭಗಳಲ್ಲಿಯೂ ಇವರ ತೋಟದಲ್ಲಿ ಬಾಳೆ ಇದ್ದೇ ಇರುತ್ತದೆ. ಒಂದು ಜಾಗದಲ್ಲಿ ಬೆಳೆ ಬಂದ ನಂತರ ಪಕ್ಕದಲ್ಲಿ ಬಾಳೆಹಣ್ಣು ಹಾಕುತ್ತಾರೆ. ವರ್ಷಪೂರ್ತಿ ಎಲ್ಲ ಋತುಗಳಲ್ಲಿ ಬಾಳೆ ಲಭ್ಯವಿರುತ್ತದೆ. ಈ ಬೆಳೆಗಳಿಗೆ ನೀರು ಹರಿಸುವುದು, ಇನ್ನಿತರ ಕೃಷಿ ಕೈಂಕರ್ಯದ ಜತೆಗೆ ಕೊಬ್ಬರಿ ಸುಲಿಯುವುದು ಸೇರಿ ಹತ್ತಾರು ಕೆಲಸಗಳನ್ನು ಮಾಡುತ್ತಾರೆ.
ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಸಮಯ ವ್ಯರ್ಥ ಮಾಡದೆ ಕೃಷಿಯಲ್ಲೂ ತೊಡಗಿಸಿಕೊಂಡಿರುವ ಇವರು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಯಂತ್ರೋಪಕರಣಗಳ ಬಳಕೆಯಿಂದ ಆದಾಯ ಗಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ವ್ಯವಸಾಯ ಎಂದರೆ ಅಚ್ಚುಮೆಚ್ಚಿನ ಕೆಲಸವಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ ಮನಸ್ಸಿನಲ್ಲಿ ವ್ಯವಸಾಯವೇ ಬೇರೂರಿದೆ. ಮುಂದಿನ ದಿನಗಳಲ್ಲಿ ಕೃಷಿಯನ್ನೇ ಪೂರ್ಣ ಪ್ರಮಾಣದಲ್ಲಿ ಮಾಡುವ ಗುರಿ ಇದೆ ಎನ್ನುತ್ತಾರೆ ಪ್ರಶಾಂತ್. ತಂದೆ ಕೆಂಪೇಗೌಡರು ಹುಟ್ಟು ವ್ಯವಸಾಯಗಾರರಾಗಿದ್ದು, ತೆಂಗು ಮತ್ತು ಮಾವು ಬೆಳೆಸಿದ್ದಾರೆ. ಅವರ ದಾರಿಯಲ್ಲಿ ಪ್ರಶಾಂತ್ ಕೂಡ ವ್ಯವಸಾಯ ಮಾಡುತ್ತಿದ್ದು, ಏನಾದರೂ ಸಾಧನೆ ಮಾಡಬೇಕು. ದುಡಿಮೆಗೆ ಒತ್ತು ನೀಡಬೇಕು ಎನ್ನುವುದು ಇವರ ನಿಲುವು.
ಒಟ್ಟು 18 ಎಕರೆಯಲ್ಲಿ 2,200 ಬಾಳೆ, 400 ಮಾವಿನ ಗಿಡಗಳು, 20 ಹಲಸಿನ ಮರಗಳು, 50 ಸಪೋಟ ಗಿಡಗಳು, 20 ನಿಂಬೆ ಗಿಡಗಳು, 260 ತೆಂಗಿನ ಮರಗಳು, ಚೇಪೆ ಸೇರಿ ಹಲವು ಗಿಡಗಳನ್ನು ಬೆಳೆಸಿದ್ದಾರೆ. ಮುಂದೆ ಮೆಣಸು ಮತ್ತು ಏಲಕ್ಕಿ ಬೆಳೆಸುವ ಆಲೋಚನೆಯಲ್ಲಿದ್ದಾರೆ.
ವಾರ್ಷಿಕ ಸುಮಾರು 12 ಲಕ್ಷ ರೂ.ಗೂ ಹೆಚ್ಚು ಆದಾಯ ಗಳಿಸುವ ಪ್ರಶಾಂತ್, ಕೃಷಿಗಾಗಿ ಸುಮಾರು ಮೂರರಿಂದ ನಾಲ್ಕು ಲಕ್ಷ ರೂ.ಖರ್ಚು ಮಾಡುತ್ತಾರೆ. ಜಮೀನಿಗೆ ಸಂಪೂರ್ಣ ಹನಿ ನೀರಾವರಿ ಅಳವಡಿಸಿದ್ದು, ಅದಕ್ಕಾಗಿ 2.5 ಲಕ್ಷ ಲೀಟರ್ ಸಾಮರ್ಥ್ಯದ ದೊಡ್ಡ ತೊಟ್ಟಿ ನಿರ್ಮಿಸಿದ್ದಾರೆ. ಭವಿಷ್ಯದಲ್ಲಿ ಕೃಷಿಗೆ ಉತ್ತಮ ಅವಕಾಶವಿದ್ದು, ಜತೆಗೆ ಆಹಾರ ಪದಾರ್ಥ ಬೆಳೆಯುವವರ ಸಂಖ್ಯೆ ಕ್ಷಿಣಿಸುತ್ತಿರುವ ಹೊತ್ತಿನಲ್ಲಿ ಮುಂದಿನ ಪೀಳಿಗೆಗೆ ಕೃಷಿ ಜೀವಂತಿಕೆ ಪರಿಚಯಿಸುವ ಮನದಾಸೆ ಹೊಂದಿದ್ದಾರೆ.
ಪ್ರಶಾಂತ್ ಮೊಬೈಲ್ ಸಂಪರ್ಕ : 9900944699 ಭೇಟಿಯ ಸಮಯ ಬೆಳಗ್ಗೆ 9 ರಿಂದ ಸಂಜೆ 6.