ನ್ಯೂಸ್

ಖಾಸಗಿ ಕಾಲೇಜುಗಳಿಂದ ಆಯುಷ್ ವಿವಿಗೆ ಹಿನ್ನಡೆ

ಶಿವಮೊಗ್ಗ: ಸೋಗಾನೆಯಲ್ಲಿ ಆಯುಷ್ ವಿವಿ ಸ್ಥಾಪನೆಗೆ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿ 20 ಕೋಟಿ ರೂ. ಅನುದಾನ ಮೀಸಲಿಟ್ಟು ವರ್ಷ ಕಳೆದರೂ ಖಾಸಗಿ ಆಯುರ್ವೇದ ಕಾಲೇಜು ಮತ್ತು ನರ್ಸಿಂಗ್ ಹೋಮ್‌ಗಳಿಂದ ಯೋಜನೆಗೆ ಹಿನ್ನಡೆಯಾಗಿದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ದೂರಿದ್ದಾರೆ.

ವಿಧಾನ ಪರಿಷತ್ ಮಾಜಿ ಸಭಾಪತಿ ಡಾ. ಡಿ.ಎಚ್.ಶಂಕರಮೂರ್ತಿ ಅವರ ಶಿಫಾರಸ್ಸಿನ ಮೇರೆಗೆ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಆಯುಷ್ ವಿವಿ ಘೋಷಣೆ ಮಾಡಿ 100 ಎಕರೆ ಜಾಗ ಮಂಜೂರು ಮಾಡಿದ್ದರು. 2021-22ನೇ ಸಾಲಿನ ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ 20 ಕೋಟಿ ರೂ. ಅನುದಾನ ಮೀಸಲಿಟ್ಟರು. ಅದರಲ್ಲಿ ಈಗಾಗಲೇ 92 ಲಕ್ಷ ರೂ. ಬಿಡುಗಡೆ ಮಾಡಿದ್ದು 100 ಮೀಟರ್ ಕಾಂಪೌಂಡ್ ನಿರ್ಮಾಣ ಮಾಡಿದ್ದು ಬಿಟ್ಟರೆ ವಿವಿ ಆರಂಭಗೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಆಯುಷ್ ವಿವಿ ಸ್ಥಾಪನೆಯಿಂದ ಖಾಸಗಿ ಮತ್ತು ಸರ್ಕಾರಿ ಆಯುರ್ವೇದ, ಯುನಾನಿ, ಹೋಮಿಯೋಪತಿ, ಯೋಗ, ನ್ಯಾಚುರೋಪತಿ ಕಾಲೇಜುಗಳು ವಿವಿ ವ್ಯಾಪ್ತಿಯೊಳಗೆ ಬರಲಿವೆ ಎಂದು ಹೇಳಿದರು.

ಟ್ರಸ್ಟಿ ಡಾ. ಶೇಖರ್ ಗೌಳೇರ್ ಮಾತನಾಡಿ, ದಕ್ಷಿಣ ಭಾರತದಲ್ಲಿ ಮೊದಲ ಆಯುಷ್ ವಿವಿಯನ್ನು ಶಿವಮೊಗ್ಗದಲ್ಲಿ ಸ್ಥಾಪನೆ ಮಾಡಬೇಕಿದೆ. ಇದರಿಂದ ರಾಜ್ಯದ 110 ಕಾಲೇಜುಗಳು, 28ರಿಂದ 30 ಸಾವಿರ ವಿದ್ಯಾರ್ಥಿಗಳು ವಿವಿ ವ್ಯಾಪ್ತಿಗೆ ಬರಲಿದ್ದಾರೆ ಎಂದರು. ಟ್ರಸ್ಟಿಗಳಾದ ಎ.ಚಾಬೂಸಾಬ್, ಹೊಳೆಮಡಿಲು ವೆಂಕಟೇಶ್, ಎಚ್.ಎಂ.ಸಂಗಯ್ಯ, ಶಂಕರನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.