ರಾಯಲ್ಪಾಡು ಸಮೀಪದಲ್ಲಿ ಕಂದಕಕ್ಕೆ ಉರುಳಿದ ಖಾಸಗಿ ಬಸ್​ ಜಖಂಗೊಂಡಿರುವುದು. 
ನ್ಯೂಸ್

ಕಂದಕಕ್ಕೆ ಉರುಳಿದ ಖಾಸಗಿ ಬಸ್​

ಕಿರುವಾರ ಎಸ್.ಸುದರ್ಶನ್

ಶ್ರೀನಿವಾಸಪುರ/ರಾಯಲ್ಪಾಡು: ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಕ್ರಾಸ್​ ಸಮೀಪ ಭಾನುವಾರ ರಾತ್ರಿ ಖಾಸಗಿ ಬಸ್​ ಕಂದಕಕ್ಕೆ ಉರುಳಿ ಒಬ್ಬ ಪ್ರಯಾಣಿಕ ಮೃತಪಟ್ಟಿದ್ದು, 39 ಮಂದಿಗೆ ಗಂಭೀರ ಗಾಯಗಳಾಗಿವೆ.

ಆಂಧ್ರದ ಕನಿಗಿರಿ ನಗರದ ನಿವಾಸಿ ಅನಿಲ್​ರೆಡ್ಡಿ (23) ಮೃತ.

ಬೆಂಗಳೂರಿನಿಂದ ಆಂಧ್ರ ಪ್ರದೇಶದ ಕನಿಗಿರಿ ನಗರಕ್ಕೆ ಹೋಗುತ್ತಿದ್ದ ಖಾಸಗಿ ಸ್ಲೀಪರ್​ ಕೋಚ್​ ಬಸ್​ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ 40 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಮೃತ ಅನಿಲ್​ರೆಡ್ಡಿ ಮೃತದೇಹವನ್ನು ಶ್ರೀನಿವಾಸಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಅನಿಲ್​ಕುಮಾರ್​ ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿ ಮನೆಗೆ ಹಿಂತಿರುಗುತ್ತಿದ್ದ ಎನ್ನಲಾಗಿದೆ.

39 ಗಾಯಾಳುಗಳನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗಿದೆ.

ಸ್ಥಳಕ್ಕೆ ಹೆಚ್ಚುವರಿ ಎಸ್​ಪಿ ರವಿಶಂಕರ್​, ಡಿವೈಎಸ್​ಪಿ ನಂದಕುಮಾರ್​, ಸಿಪಿಐ ಶಿವಕುಮಾರ್​, ರಾಯಲ್ಪಾಡು ಪಿಎಸ್​ಐ ಯೋಗೇಶ್​ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾಯಲ್ಪಾಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.