ಬೆಂಗಳೂರು: ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಪ್ರಮುಖ ರಸ್ತೆಗಳ ಸುಧಾರಣೆಗೆ ಒಟ್ಟು ಐದು ಸಾವಿರ ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಿ, ಒಪ್ಪಿಗೆ ಕೋರಿ ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದರು.
ವಿಕಾಸಸೌಧದಲ್ಲಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಸೋಮವಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಸ್ತೆ ಅಭಿವೃದ್ಧಿ ಕಾರ್ಯಕ್ರಮದಡಿ ನಾಲ್ಕು ಸಾವಿರ ಕೋಟಿ ರೂ., ನಬಾರ್ಡ್ ಮತ್ತು ಕೇಂದ್ರೀಯ ರಸ್ತೆ ನಿಧಿಯಡಿ ತಲಾ 500 ಕೋಟಿ ರೂ. ವೆಚ್ಚದ ಈ ಕಾಮಗಾರಿಗಳನ್ನು ಹೊಸದಾಗಿ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಅಧಿಕಾರವಹಿಸಿಕೊಂಡ ನಂತರ 50 ಬಾರಿ ಇಲಾಖೆ ಸಭೆ ಮಾಡಿರುವೆ. ಪ್ರತಿ ಮಾಸಿಕ ಸಭೆ ನಡೆಸಿ ಪರಿಶೀಲಿಸಲಾಗುತ್ತಿದ್ದು, ಚಾಲ್ತಿ ಕಾಮಗಾರಿಗಳು ಭಾಗಶಃ ಮುಗಿದಿವೆ. ಹಿಂದಿನ ಸರ್ಕಾರದ ಅವಧಿ ಲೋಪದೋಷಗಳ ಬಗ್ಗೆ ನಿರ್ದಿಷ್ಟ ದೂರುಗಳು ಸಲ್ಲಿಕೆಯಾದರೆ ತನಿಖೆಗೆ ಸಿದ್ಧವೆಂದರು.
ಹಿಂದಿನ ಸರ್ಕಾರದ ಬಾಕಿ ಬಿಲ್ ಹೊರೆ ಮೊತ್ತ ಆರು ಸಾವಿರ ಕೋಟಿ ರೂ.ಗಳಷ್ಟಿದ್ದರೆ, ಇಲಾಖೆ ಬಳಿಕ ಎರಡು ಸಾವಿರ ಕೋಟಿ ರೂ. ಅನುದಾನವಿದೆ. ಹೆಚ್ಚುವರಿ ನಾಲ್ಕು ಸಾವಿರ ಕೋಟಿ ರೂ. ಬಿಡುಗಡೆ ಮಾಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಒಟ್ಟು 38 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ಕೋರಿ ಕೇಂದ್ರ ಸರ್ಕಾರಕ್ಕೆ ಅಧಿಕೃತ ಬೇಡಿಕೆ ಪಟ್ಟಿ ಸಲ್ಲಿಸಲಾಗಿದೆ. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ 2-3 ಸಲ ಭೇಟಿ ಮಾಡಿ, ಈ ಮನವಿಯತ್ತ ಗಮನಸೆಳೆಯಲಾಗಿದೆ. ಇದುವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದರು.
ರಾಜ್ಯದಲ್ಲಿ ಒಟ್ಟು ಒಂದು ಲಕ್ಷ ಕಿ.ಮೀ. ಉದ್ದದಷ್ಟು ಜಿಲ್ಲಾ ಪ್ರಮುಖ, 50 ಸಾವಿರ ಕಿ.ಮೀ.ನಷ್ಟು ರಾಜ್ಯ ಹೆದ್ದಾರಿಗಳಿವೆ. ಜಿಲ್ಲಾ ಪ್ರಮುಖ, ರಾಜ್ಯ ಹೆದ್ದಾರಿಗಳ ಸಂಖ್ಯೆ ಹೆಚ್ಚಳಕ್ಕೆ ತಕ್ಕಂತೆ ಇಲಾಖೆಗೆ ನೀಡುವ ಅನುದಾನ ಹೆಚ್ಚಿಸಿದ್ದರೆ ಅನುಕೂಲವಾಗುತ್ತಿತ್ತು.
ಆದರೆ ಕಳೆದ 10 ವರ್ಷಗಳಿಂದ ಇಲಾಖೆಗೆ ನೀಡುತ್ತಿರುವ 10 ಸಾವಿರ ಕೋಟಿ ರೂ. ಅನುದಾನದಲ್ಲಿ ಏರಿಕೆಯಾಗಿಲ್ಲ, ರಸ್ತೆಗಳ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಹೊಸದಾಗಿ ಜಿಲ್ಲಾ ಪ್ರಮುಖ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಪರಿವರ್ತಿಸಲು ಯೋಚಿಸಿಲ್ಲವೆಂದರು.
ಉತ್ತಮಗುಣದರ್ಜೆ ರಾಜ್ಯ ಹೆದ್ದಾರಿಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವ ಉದ್ದೇಶದಿಂದ 12 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹದ ಚಿಂತನೆಯಿದೆ. ಆದರೆ ಮೋಟಾರು ವಾಹನಗಳ ಸಂಚಾರ ದಟ್ಟಣೆ ಇನ್ನಿತರ ದತ್ತಾಂಶಗಳು, ಸಾಧಕ-ಬಾಧಕ ಪರಾಮರ್ಶಿಸಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರು ತಿಂಗಳು ಸಮೀಪಿಸುತ್ತಿವೆ. ರಸ್ತೆಗಳಿಗೆ ಒಂದು ಪುಟ್ಟಿ ಮಣ್ಣು ಹಾಕಿಲ್ಲ, ಒಂದು ಕಿ.ಮೀ. ರಸ್ತೆ ಹೊಸದಾಗಿ ಅಭಿವೃದ್ಧಿಪಡಿಸಿಲ್ಲ ಎಂದು ರಾಜಕೀಯ ಕಾರಣಕ್ಕೆ ಪ್ರತಿಪಕ್ಷಗಳು ಟೀಕಿಸುವುದು ಅಚ್ಚರಿಯೇನಲ್ಲ. ಬಾಕಿ ಬಿಲ್ ಹೊರೆಯ ಮಧ್ಯೆ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಿಲ್ಲಿಸಿಲ್ಲವೆಂದು ಸತೀಶ್ ಜಾರಕಿಹೊಳಿ ತಿಳಿಸಿದರು.