ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿ ಆಗಿರುವ ಅವರಿಗೆ 6106 ಖೈದಿ ನಂಬರ್ ಕೊಡಲಾಗಿದೆ. ಫ್ಯಾನ್ಸ್ ಪಾಲಿಗೆ ಇದು ಲಕ್ಕಿ ನಂಬರ್ ಎಂಬ ಭಾವನೆ ಕೆಲವರಿಗೆ ಮೂಡಿದೆ.
ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಕಳಿಸಿದ್ದ ಎಂಬ ಕಾರಣಕ್ಕೆ ರೇಣುಕಾ ಸ್ವಾಮಿ ಎಂಬಾತನನ್ನು ಕೊಲೆ ಮಾಡಿದ ಆರೋಪದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಅವರಿಗೆ 6106 ಖೈದಿ ನಂಬರ್ ನೀಡಲಾಗಿದೆ. ಈ ನಂಬರ್ ಮೇಲೆ ಕೆಲವು ಅಭಿಮಾನಿಗಳಿಗೆ ಆಕರ್ಷಣೆ ಹೆಚ್ಚಿದೆ. ಇದೇ ನಂಬರ್ನಲ್ಲಿ ಹೊಸ ವಾಹನಗಳ ನೋಂದಣಿ ಮಾಡಿಸಿಕೊಳ್ಳಲು ಕೆಲವು ಫ್ಯಾನ್ಸ್ ಮುಂದಾಗಿದ್ದಾರೆ ಎನ್ನಲಾಗಿದೆ.
ಪರಪ್ಪನ ಅಗ್ರಹಾರದಲ್ಲಿ ಇರುವ ದರ್ಶನ್ ಅವರನ್ನು ನೋಡಲೇಬೇಕು ಎಂದು ಕೆಲವು ಅಭಿಮಾನಿಗಳು ಹಠ ಹಿಡಿದಿದ್ದಾರೆ. ದೂರದ ಊರುಗಳಿಂದ ಬಂದಿರುವ ಫ್ಯಾನ್ಸ್ ಈಗಾಗಲೇ ಜೈಲಿನ ಮುಂದೆ ನಿಂತು ಕಾಯುತ್ತಿದ್ದಾರೆ. ‘ಅವರನ್ನು ನೋಡಿಕೊಂಡೇ ನಾವು ಊರಿಗೆ ಹೋಗೋದು’ ಎಂದು ಕೆಲವರು ಕಣ್ಣೀರು ಹಾಕುತ್ತಿದ್ದಾರೆ. ಸದ್ಯಕ್ಕೆ ದರ್ಶನ್, ಪವಿತ್ರಾ ಹಾಗೂ ಅವರ ಸಹಚರರು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.