ನ್ಯೂಸ್

ಜೀವನಾಂಶ ಪಾವತಿಸದ ಪತಿಗೆ ಜೈಲು ಶಿಕ್ಷೆ ಆದೇಶ ರದ್ದು

ಬೆಂಗಳೂರು: ಪತ್ನಿಗೆ ಜೀವನಾಂಶ ಪಾವತಿಸದ ವಿಚಾರವಾಗಿ ಪತಿಗೆ ಹೆಚ್ಚುವರಿಯಾಗಿ ಎರಡು ತಿಂಗಳು ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಚಂದ್ರಶೇಖರ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಪ್ರಕರಣದಲ್ಲಿ ಪತ್ನಿಯೂ ಮೊದಲು 24 ತಿಂಗಳ ಜೀವನಾಂಶದ ಬಾಕಿ ವಸೂಲಿ ಮಾಡಲು ಅರ್ಜಿ ಸಲ್ಲಿಸಿದ್ದರು ಮತ್ತು ಆಗ ನ್ಯಾಯಾಲಯ ಅರ್ಜಿದಾರರಿಗೆ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದು, ಕಾನೂನು ಬದ್ಧ ಆದೇಶ. ಆದರೆ ಪತ್ನಿ ತದನಂತರ ಅದೇ 24 ತಿಂಗಳ ಬಾಕಿ ಮೊತ್ತ ವಸೂಲಿಗಾಗಿ ಎರಡನೇ ಅರ್ಜಿ ಸಲ್ಲಿಸಿದ್ದಾರೆ. ಆರ್ಜಿಯಂತೆ ಎರಡು ತಿಂಗಳು ಶಿಕ್ಷೆ ವಿಧಿಸಿರುವುದು ಕಾನೂನ್ವಯ ಒಪ್ಪುವಂತದಲ್ಲ ಎಂದು ಪೀಠ ಹೇಳಿದೆ.

ಜತೆಗೆ, ಒಂದು ವೇಳೆ ಸಂಪೂರ್ಣ ಮೊತ್ತ ಬಾಕಿಯಿದ್ದು, ಪಾವತಿಸದಿದ್ದರೆ ಜೈಲು ಶಿಕ್ಷೆಯನ್ನು ಒಂದು ತಿಂಗಳವರೆಗೆ ವಿಸ್ತರಿಸಬಹುದಾಗಿದೆ. ಪ್ರತಿ ತಿಂಗಳ ನಿರ್ವಹಣೆ ಮೊತ್ತದ ಬಿಡುಗಡೆಗಾಗಿ ಪ್ರತ್ಯೇಕ ಅರ್ಜಿ ಸಲ್ಲಿಸಬಹುದು. ಆದಾರೂ ಸಂಪೂರ್ಣ ಬಾಕಿ ಬಿಡುಗಡೆಗೆ ಅರ್ಜಿ ಸಲ್ಲಿಸಿದರೆ, ಜೈಲು ಶಿಕ್ಷೆ ಒಂದು ತಿಂಗಳನ್ನು ಮೀರಬಾರದು ಎಂಬುದಾಗಿ ತಿಳಿಸಲಾಗಿದೆ. ಆದರೆ, ಜೀವನಾಂಶದ ಬಾಕಿ ಕೋರಿರುವ ಒಂದೇ ಅರ್ಜಿಗೆ ನಿಗದಿತ ಅವಧಿ ಮೀರಿ ಬಂಧನದಲ್ಲಿಡುವುದು ಕಾನೂನು ಬಾಹಿರ ಎಂದು ಪೀಠ ಹೇಳಿದೆ.