ಕಡೂರು ಪಟ್ಟಣದ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು. ಭಂಡಾರಿ ಶ್ರೀನಿವಾಸ್, ಮೋಹನ್‌ಕುಮಾರ್, ರಮೇಶ್, ಮನು, ಯಾಸೀನ್, ಇಕ್ಬಾಲ್ ಇತರರಿದ್ದರು. 
ನ್ಯೂಸ್

ಸರ್ಕಾರದಿಂದ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ

ಶಿವಕುಮಾರ ಎಸ್.ಪಿ.

ಕಡೂರು: ಬಡ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರೆಯಬೇಕೆಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ಟಣದ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ಭಾನುವಾರ 1.60 ಕೋಟಿ ರೂ. ವೆಚ್ಚದಲ್ಲಿ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈ ಹಿಂದೆ ವಿದ್ಯಾರ್ಥಿ ನಿಲಯವನ್ನು ವೇದಾವತಿ ಶಾಲೆ ಹಿಂಭಾಗದ ಸಣ್ಣ ನಿವೇಶನದಲ್ಲಿ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದರೆ ಅಲ್ಲಿನ ನಿವಾಸಿಗಳು ಇದಕ್ಕೆ ವಿರೋಧಿಸಿದ್ದರು. ಮನೆಗಳಿಗೆ ತೀರ ಹತ್ತಿರವಾಗಿ ಅವೈಜ್ಞಾನಿಕವಾಗಿ ವಸತಿ ನಿಲಯದ ನಿರ್ಮಾಣದ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಇದನ್ನು ಮನಗಂಡು ವಿದ್ಯಾರ್ಥಿ ನಿಲಯದ ಜಾಗ ಬದಲಾಯಿಸಿ ಶಿವಕುಮಾರಸ್ವಾಮಿ ಬಡಾವಣೆಯ ವಿಶಾಲ ನಿವೇಶನದಲ್ಲಿ ನಿರ್ಮಿಸಲು ಪುರಸಭೆ ಮತ್ತು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿ ಸ್ಥಳಾವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ಅಲ್ಪಸಂಖ್ಯಾತರು ವಾಸಿಸುತ್ತಿರುವ ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರ 5 ಕೋಟಿ ರೂ. ಕಡೂರು ಕ್ಷೇತ್ರಕ್ಕೆ ನೀಡಿದೆ. ಬಡವರ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಈಗ ಸುವರ್ಣಯುಗ ಎಂದು ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಬಳ್ಳಿರಾಮ್ ಕುಶಾಲ್ ರಾವ್ ಮಾತನಾಡಿ, ತಾಲೂಕಿನ ಗೆದ್ಲೆಹಳ್ಳಿ ಸಮೀಪದ ಅಲ್ಪಸಂಖ್ಯಾತರ ವಸತಿ ಶಾಲೆ ಸುಸಜ್ಜಿತ ಕಟ್ಟಡದಲ್ಲಿ ನಡೆಯುತ್ತಿದೆ. ಈಗಾಗಲೇ ಪ್ರಥಮ ಪಿಯುಸಿಯನ್ನು ಆರಂಭಿಸಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಆರಂಭಿಸಲಾಗುವುದು ಎಂದರು.
ಪುರಸಭಾ ಸದಸ್ಯ ಭಂಡಾರಿ ಶ್ರೀನಿವಾಸ್ ಮಾತನಾಡಿ, ರಾಜ್ಯ ಸರಕಾರವು ಅಲ್ಪಸಂಖ್ಯಾತರಿಗೆ ಹಲವಾರು ಕಾರ್ಯಕ್ರಮ ನೀಡಿದೆ. ಶ್ರೀ ಮಾತಾ ಬಡಾವಣೆಯಲ್ಲಿ ಸಾರ್ವಜನಿಕರ ಬಳಕೆಗಾಗಿ ಮೀಸಲಿಟ್ಟ ಸುಸಜ್ಜಿತ ನಿವೇಶವನ್ನು ಪುರಸಭೆಯಿಂದ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಎಂದರು.
ಪುರಸಭೆ ಸದಸ್ಯರಾದ ತೋಟದಮನೆ ಮೋಹನ್‌ಕುಮಾರ್, ಈರಳ್ಳಿ ರಮೇಶ್, ಸೈಯಾದ್ ಇಕ್ಬಾಲ್, ಮರುಗುದ್ದಿ ಮನು, ಸೈಯಾದ್ ಯಾಸೀನ್, ಮೋಹನ್‌ಕುಮಾರ್, ಮುಖಂಡರಾದ ಇಮ್ರಾನ್ ಖಾನ್, ಅಬಿದ್ ಪಾಷಾ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಗಂಗಾಧರ್, ಸಿಪಿಐ ದುರ್ಗಪ್ಪ, ಬೇಬಿ, ಚಂದ್ರುಶೇಖರ್ ಹಾಗೂ ಇಲಾಖೆಯ ಸಿಬ್ಬಂದಿಗಳು ಇದ್ದರು.