ಶಿರಾಳಕೊಪ್ಪ ಪುರಸಭೆ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಮಹಬಲೇಶ್ ಅವರನ್ನು ಸದಸ್ಯರು ಸನ್ಮಾನಿಸಿದರು. ಮುದಸೀರ್, ಸಾದಿಕ್, ನಿರಂಜನ್, ಗದಿಗೇಶ್ ಇತರರಿದ್ದರು.  
ನ್ಯೂಸ್

ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡಿ

ಶಿವಕುಮಾರ ಎಸ್.ಪಿ.

ಶಿರಾಳಕೊಪ್ಪ: ಪಟ್ಟಣದ ಪುರಸಭೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಸಿ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಸದಸ್ಯ ತಡಗಣಿ ರಾಜಣ್ಣ ಮಾತನಾಡಿ, ಈ ಹಿಂದೆ ಕಟ್ಟಿಸಿದ ಹಳೇ ಕಾಂಪ್ಲೆಕ್ಸ್‌ನ ಮಹಡಿ ಸೋರುತ್ತಿದ್ದು, ಅದನ್ನು ಸರಿಪಡಿಸಬೇಕು. ಗೇಟುಗಳು ಇಲ್ಲದ್ದರಿಂದ ರಾತ್ರಿ ವೇಳೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಗಮನಕ್ಕೆ ತಂದರು. ಸಮಸ್ಯೆ ಬಗೆಹರಿಸಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಯಿತು.

ಹಾಳಾಗಿರುವ ಜಾಕ್‌ವೆಲ್ ಮೋಟಾರ್ ದುರಸ್ತಿಗೊಳಿಸಬೇಕು. ನೀರಿನ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಭಿಯಂತ ಶೇಖರ್ ನಾಯಕ್, ಕಳೆದ ಬಾರಿ 18 ಮೋಟಾರ್ ರಿಪೇರಿ ಮಾಡಿಸಲಾಗಿತ್ತು. ಈ ಬಾರಿ 6 ಮೋಟಾರ್ ರಿಪೇರಿ ಆಗಬೇಕು. ಕೆಲದಿನಗಳ ಹಿಂದೆ ಭಾರಿ ಮಳೆ ಸಂದರ್ಭದಲ್ಲಿ ಸಿಡಿಲು ಬಡಿದು ಜಲ ಶುದ್ಧೀಕರಣ ಘಟಕದಲ್ಲಿ 20 ಎಚ್‌ಪಿ ಸಬ್‌ಮರ್ಸಿಬಲ್ ಮೋಟಾರ್ ಹಾಗೂ 20 ಎಚ್‌ಪಿ ಮೋಟಾರ್ ಸುಟ್ಟುಹೋಗಿವೆ ಎಂದು ತಿಳಿಸಿದರು. ಆದ್ಯತೆ ನೀಡಿ ಅವುಗಳನ್ನು ಶೀಘ್ರ ಸರಿಪಡಿಸುವಂತೆ ಸದಸ್ಯರು ಒಪ್ಪಿಗೆ ಸೂಚಿಸಿದರು.

ರಾಘವೇಂದ್ರ ಮಾತನಾಡಿ, ಸ್ವಾತಂತ್ರೃ ದಿನಾಚರಣೆಗೆ ಶಾಮಿಯಾನ ಮತ್ತು ಇತರ ವಸ್ತುಗಳನ್ನು ಪೂರೈಸಿದವರಿಗೆ ಇದುವರೆಗೆ ಹಣ ಪಾವತಿಸಿಲ್ಲ ಎಂದರೆ ಹೇಗೆ? ಮುಂದಿನ ದಿನಗಳಲ್ಲಿ ವಸ್ತುಗಳನ್ನು ಪೂರೈಸಲು ಬೇರೆಯವರೂ ಯೋಚಿಸುತ್ತಾರೆ. ಆದ್ದರಿಂದ ಅವರಿಗೆ ಶೀಘ್ರವಾಗಿ ಹಣ ಪಾವತಿಸಿ ಎಂದರು.

ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ ಮಾತನಾಡಿ, ನಮ್ಮ ಸಿಬ್ಬಂದಿ ನೀರಿನ ಕಂದಾಯ ಕೇಳಲು ಹೋದಾಗ ಪುರಸಭೆಯ ಕೆಲ ಸದಸ್ಯರು ಅವರನ್ನು ಕೇಳಬೇಡಿ, ಕೆಲಮನೆಗಳಿಗೆ ಹೋಗಬೇಡಿ ಎಂದು ಹೇಳುತ್ತಾರೆ. ಇದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಮುದಸೀರ್, ಸದಸ್ಯ ಸಾದಿಕ್, ಅಭಿಯಂತ ನಿರಂಜನ್, ಗದಿಗೇಶ್ ಇತರರಿದ್ದರು.