ನ್ಯೂಸ್

ಪರೀಕ್ಷೆ ವೇಳೆ ಸುರಕ್ಷತೆಗೆ ಆದ್ಯತೆ ನೀಡಿ: ಸಚಿವ ಸುರೇಶ್ ಕುಮಾರ್​ಗೆ ಎಂಎಲ್​ಸಿಗಳ ಸಲಹೆ

ಬೆಂಗಳೂರು: ಶೈಕ್ಷಣಿಕ ಚಟುವಟಿಕೆಗಳ ಕಾರ್ಯಾರಂಭದ ವಿಷಯ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್​ಕುಮಾರ್ ವಿಧಾನಪರಿಷತ್ ಸದಸ್ಯರೊಂದಿಗೆ ನಡೆಸಿದ ವೆಬಿನಾರ್ (ವಿಡಿಯೋ ಸಂವಾದ) ದಲ್ಲಿ ಎಲ್ಲರೂ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಗಳನ್ನು ಸುರಕ್ಷಿತವಾಗಿ ನಡೆಸುವಂತೆ ಸಲಹೆ ನೀಡಿದ್ದಾರೆ.

ಲಾಕ್​ಡೌನ್​ನಿಂದಾಗಿ ಬಾಕಿ ಉಳಿದಿರುವ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆ ಬಗ್ಗೆ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರು ಸಚಿವರ ಜತೆ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು, ಪರೀಕ್ಷೆಗಾಗಿ ವಿದ್ಯಾರ್ಥಿಗಳು ಆತುರದಿಂದ ಕಾಯುತ್ತಿರುವುದರಿಂದ ಸಾಮಾಜಿಕ ಅಂತರ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಬಾಕಿ ಪರೀಕ್ಷೆಯನ್ನು ನಡೆಸುವಂತೆ ತಿಳಿಸಿದ್ದಾರೆ.

ಪಠ್ಯಕ್ರಮ ಕಡಿತ ಬೇಡ: ಶೈಕ್ಷಣಿಕ ಅವಧಿಗಳು ಈ ವರ್ಷ ಕಡಿಮೆ ಸಿಗುವುದರಿಂದ ಪಠ್ಯದಲ್ಲಿ ಶಾಲಾ ಹಂತದಲ್ಲಿ ಅಧ್ಯಯನ ಕಡಿತ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಆಲೋಚನೆ ಮಾಡಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರು, ಬೇಸಿಗೆ ರಜೆ ಬಳಸಿಕೊಂಡು ಮತ್ತು ಶನಿವಾರ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸುವ ಮೂಲಕ ಪಠ್ಯಕ್ರಮವನ್ನು ಸಂಪೂರ್ಣಗೊಳಿಸಿ. ಯಾವುದೇ ಕಾರಣಕ್ಕೂ ಕಡಿತ ಮಾಡುವುದು ಬೇಡ ಎಂದು ಸಲಹೆ ನೀಡಿದ್ದಾರೆ.

ಪಿಯುಸಿ ಹಂತದ ಸಿಲಬಸ್ ಕಡಿಮೆ ಮಾಡುವುದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿ ನಿರ್ಧಾರ ಮಾಡಬೇಕು. ನಮ್ಮ ರಾಜ್ಯವೊಂದರಲ್ಲೇ ಕಡಿತ ಮಾಡಿದರೆ, ಅದು ಮುಂದೆ ನಮ್ಮ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಬಬಹುದಾದ ಸಾಧ್ಯತೆಗಳಿರುತ್ತವೆ. ಕೇಂದ್ರ ಪಠ್ಯದ ಶಾಲೆಗಳಲ್ಲಿ ಈ ಕುರಿತು ತೆಗೆದುಕೊಳ್ಳುವ ತೀರ್ವನಗಳಿಗೆ ಅನುಗುಣವಾಗಿ ನಾವು ನಮ್ಮ ನಡೆಯನ್ನು ನಿರ್ಧರಿಸಬೇಕಾಗುತ್ತದೆ ಎಂದರು.

ವೀಡಿಯೋ ಸಂವಾದಲ್ಲಿ ವಿಧಾನಪರಿಷತ್ತಿನ ಸದಸ್ಯರಾದ ಬಸವರಾಜ ಹೊರಟ್ಟಿ, ಶರಣಪ್ಪ ಮಟ್ಟೂರು, ಡಾ. ಚಂದ್ರಶೇಖರ ಪಾಟೀಲ, ಪುಟ್ಟಣ್ಣ, ಸಂಕನೂರು, ಅ. ದೇವೇಗೌಡ, ಹನುಮಂತ ನಿರಾಣಿ, ಆಯನೂರು ಮಂಜುನಾಥ, ಚೌಡರೆಡ್ಡಿ ತೂಪಲ್ಲಿ, ಮರಿತಿಬ್ಬೇಗೌಡ, ಅರುಣ ಶಹಾಪುರ ಭಾಗವಹಿಸಿದ್ದರು. ಈ ಸಭೆಯಲ್ಲಿ ನೇರವಾಗಿ ಕೆ.ಟಿ. ಶ್ರೀಕಂಠೇಗೌಡ, ಭೋಜೆಗೌಡ, ನಾರಾಯಣಸ್ವಾಮಿ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್ ಇತರರಿದ್ದರು.

ಆತುರದಲ್ಲಿ ಶಾಲೆ ತೆರೆಯುವುದಿಲ್ಲ

ಶಾಲೆಗಳನ್ನು ತರಾತುರಿಯಲ್ಲಿ ತೆರೆಯುವುದಿಲ್ಲ. ಪಾಲಕರು ಮತ್ತು ವಿದ್ಯಾರ್ಥಿಗಳು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲವೆಂದು ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಶಾಲೆಗಳ ಆರಂಭಕ್ಕೆ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳಿಗೆ ಟ್ಟಿಟರ್ ಮೂಲಕ ಪ್ರತಿಕ್ರಿಯಿಸಿದ್ದು, ಮಕ್ಕಳ ಹಿತ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಇನ್ನೂ ಚರ್ಚೆ ಹಂತದಲ್ಲಿವೆಯೇ ಹೊರತು ಅಂತಿಮ ಮತ್ತು ಅಧಿಕೃತವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಾಳಿಯಲ್ಲಿ ಶಾಲೆ ಆರಂಭಿಸಿ

ಪಾಳಿಯಲ್ಲಿ ಶಾಲೆ ಆರಂಭಿಸುವುದು ಉತ್ತಮ. ಕೆಲವರು ದಿನಬಿಟ್ಟು ದಿನ ಒಂದೊಂದು ತರಗತಿ ಶಾಲೆ ನಡೆಸಬೇಕು. ಶಾಲಾ ಹಂತದಲ್ಲಿ ಇಲ್ಲವೆ ಕ್ಲಸ್ಟರ್ ಹಂತದಲ್ಲಿ ಪರೀಕ್ಷೆ ಮತ್ತು ಮೌಲ್ಯಮಾಪನ ನಡೆಸುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮತ್ತು ಶೀಘ್ರವಾಗಿ ಪ್ರಕ್ರಿಯೆ ಮುಗಿಸಲು ಸಾಧ್ಯವಾಗುತ್ತದೆ ಎಂದು ಎಂಎಲ್​ಸಿಗಳು ತಿಳಿಸಿದರು. ಈ ಬಗ್ಗೆ ಇನ್ನೊಮ್ಮೆ ತಮ್ಮೊಂದಿಗೆ ರ್ಚಚಿಸುದಾಗಿ ಸಚಿವ ಸುರೇಶ್​ಕುಮಾರ್ ತಿಳಿಸಿದರು.