ಶಿಕಾರಿಪುರ: ಕೆಲವೇ ದಿನಗಳಲ್ಲಿ ಪಟ್ಟಣದಲ್ಲಿ ಮಾರಿಕಾಂಬೆ ಜಾತ್ರೆ ಆರಂಭವಾಗಲಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಚರಂಡಿಗಳ ಸ್ವಚ್ಛತೆ ಮಾಡುವ ಜತೆಗೆ ನೀರು ಪೂರೈಕೆ ಮತ್ತಿತರ ಮೂಲ ಸೌಲಭ್ಯಗಳ ಕಡೆಗೆ ಗಮನ ನೀಡಬೇಕು ಎಂದು ಪುರಸಭೆ ಸದಸ್ಯರು ಒಕ್ಕೊರಲಿಂದ ಒತ್ತಾಯಿಸಿದರು.
ಅಧ್ಯಕ್ಷೆ ಶೈಲಾ ಮಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರಶಾಂತ್ ಜೀನಳ್ಳಿ, ಜಾತ್ರೆ ಜ.21ರಿಂದ 25ರವರೆಗೆ ನಡೆಯಲಿದೆ. ಈ ಬಾರಿ ಭಕ್ತರ ಸಂಖ್ಯೆಹೆಚ್ಚಾಗುವ ಸಾಧ್ಯತೆ ಇದೆ. ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚು. ಆರೋಗ್ಯ ಇಲಾಖೆಯ ಜವಾಬ್ದಾರಿ ಹೆಚ್ಚಿರುತ್ತದೆ. ಪುರಸಭೆಯಿಂದ ಚರಂಡಿಗಳನ್ನು ಸ್ವಚ್ಛ ಮಾಡಿಸಿ, ಅವಶ್ಯವಿದ್ದರೆ ಫಾಗಿಂಗ್ ಮಾಡಿಸಬೇಕು ಎಂದು ಆಗ್ರಹಿಸಿದರು.
ಈ ಬಾರಿ ಒಂದು ಸಂಚಾರ ಆರೋಗ್ಯ ಚಿಕಿತ್ಸಾ ಘಟಕದ ಅಗತ್ಯವಿದೆ. ಓರ್ವ ವೈದ್ಯ ಮತ್ತು ಸಹಾಯಕರನ್ನು ನೇಮಿಸಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಸೂಕ್ತ ವ್ಯವಸ್ಥೆ ಮಾಡಬೇಕು. ಶ್ರೀ ಹುಚ್ಚರಾಯಸ್ವಾಮಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮತ್ತು ಕಾರಂಜಿ ವ್ಯವಸ್ಥೆ ಮಾಡಿದರೆ ಭಕ್ತರಿಗೆ, ಪ್ರವಾಸಿಗರಿಗೆ ಮನೋರಂಜನೆ ದೊರೆಯುತ್ತದೆ. ರಸ್ತೆಗಳಲ್ಲಿ ಜನರ ಹಿತದೃಷ್ಟಿಯಿಂದ ವಾಹನಗಳ ಏಕಮುಖ ಸಂಚಾರ, ಕಠಿಣ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕು ಸದಸ್ಯರೆಲ್ಲರೂ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ನವೀದ್ ಖಾನ್, ನಮ್ಮಲ್ಲಿ ಇರುವುದು ಒಂದೇ ಆಂಬುಲೆನ್ಸ್. ಇನ್ನೊಂದು ಆಂಬುಲೆನ್ಸ್ ಬಾಡಿಗೆಗೆ ಪಡೆದು ಸಿಬ್ಬಂದಿ ನಿಯೋಜಿಸಲಾಗುವುದು. ಜಾತ್ರೆಯಲ್ಲಿ ಆರೋಗ್ಯ ಚಿಕಿತ್ಸಾ ಘಟಕವನ್ನು ತೆರೆದು ಅದಕ್ಕೆ ಪೂರಕವಾಗಿ ವೈದ್ಯರು, ಸಹಾಯಕರನ್ನು ನೇಮಿಸಲಾಗುವುದು ಎಂದರು.
ಪುರಸಭೆ ಮಳಿಗೆಗಳ ಖಾತೆ: ಎಪಿಎಂಸಿ ಮಳಿಗೆಗಳನ್ನು ಹೇಗೆ ಖಾತೆ ಮಾಡುತ್ತೀರಿ? ಅದರಲ್ಲಿನ ಕಾನೂನು ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತೀರಿ? ಈ ಹಿಂದೆ ನಾವು ಡೀಸೆಂಟ್ ನೋಟಿಸ್ ನೀಡಿದ್ದು ಮತ್ತೆ ಖಾತೆ ಬಗ್ಗೆ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಉಳ್ಳಿ ದರ್ಶನ್ ಗಮನಸೆಳೆದರು. ಇದಕ್ಕೆ ಉತ್ತರಿಸಿದ ಆಡಳಿತ ಪಕ್ಷದ ಸದಸ್ಯರು, ಜಿಲ್ಲಾಧಿಕಾರಿ ಅವರ ಸೂಕ್ತ ಸಲಹೆ ಪಡೆದು ಕಾನೂನು ವ್ಯಾಪ್ತಿಯಲ್ಲಿ ಮಾಡಲು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಮಳಿಗೆಗಳನ್ನು ಖಾತೆ ಮಾಡಿದರೆ ಪುರಸಭೆಗೆ ಆದಾಯ ಬರುವದಲ್ಲದೆ, ವರ್ತಕರಿಗೂ ಒಳ್ಳೆಯದಾಗುತ್ತದೆ. ಆದ್ದರಿಂದ ಕಾನೂನು ಚೌಕಟ್ಟಿನೊಳಗೆ ಖಾತೆ ಮಾಡಲು ಮುಖ್ಯಾಧಿಕಾರಿಗೆ ಹೇಳಿದ್ದೇವೆ ಎಂದರು.
ಉಪಾಧ್ಯಕ್ಷೆ ರೂಪಾ ಮಂಜುಥ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ವ್ಯವಸ್ಥಾಪಕ ರಾಜ್‌ಕುಮಾರ್ ಇದ್ದರು.