ನ್ಯೂಸ್

ಪೀಣ್ಯದ ಐ-ಸ್ಟ್ರಾಕ್ ಕೇಂದ್ರಕ್ಕೆ ಪ್ರಧಾನಿ ಭೇಟಿ; ಈ ರಸ್ತೆಗೆ ಇಳಿಯದಿರಿ

ಬೆಂಗಳೂರು: ಪೀಣ್ಯದಲ್ಲಿರುವ ಇಸ್ರೋ ಟೆಲಿಮೆಟ್ರಿಕ್ ಟ್ರ್ಯಾಕಿಂಗ್ ಆ್ಯಂಡ್ ಕಮಾಂಡ್ ಸೆಂಟರ್‌ಗೆ (ಐ-ಸ್ಟ್ರಾಕ್) ಶನಿವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಹಿನ್ನೆಲೆಯಲ್ಲಿ ನಗರದ ಬಹುತೇಕ ಕಡೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬೆಳಗಿನ ಜಾವ ಬಂದಿಳಿಯಲಿರುವ ಪ್ರಧಾನಿ ಅವರು ರಸ್ತೆ ಮಾರ್ಗವಾಗಿ ಪೀಣ್ಯದಲ್ಲಿರುವ ಐ-ಸ್ಟ್ರಾಕ್ ಕೇಂದ್ರವನ್ನು ತಲುಪಲಿದ್ದಾರೆ. ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ ವಾಪಸ್ ರಸ್ತೆ ಮಾರ್ಗದಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ದೆಹಲಿಗೆ ವಾಪಸಾಗಲಿದ್ದಾರೆ.

ರೋಡ್ ಶೋ ಇರುವುದಿಲ್ಲ. ಕೆಲ ಸ್ಥಳಗಳಲ್ಲಿ ಜನ ಜಮಾಯಿಸುವ ಸಾಧ್ಯತೆ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅಗತ್ಯ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಸುಗಮ ಸಂಚಾರ ಮತ್ತು ಸುರಕ್ಷತೆ ಹಿತದೃಷ್ಟಿಯಿಂದ ಶನಿವಾರ ಬೆಳಗಿನ ಜಾವ 4.30ರಿಂದ 9.30ರ ನಡುವೆ ಸಂಚಾರ ಮಾರ್ಗ ಬದಲು ಮಾಡಲಾಗಿದೆ. ಹಳೆಯ ವಿಮಾನ ನಿಲ್ದಾಣ ರಸ್ತೆ, ಹಳೆ ಮದ್ರಾಸ್ ರಸ್ತೆ, ಎಂ.ಜಿ.ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಬಳ್ಳಾರಿ ರಸ್ತೆ (ಮೇಖ್ರಿ ಸರ್ಕಲ್), ಸಿ.ವಿ.ರಾಮನ್ ರಸ್ತೆ, ಯಶವಂತಪುರ , ತುಮಕೂರು ರಸ್ತೆ (ಯಶವಂತಪುರ-ನಾಗಸಂದ್ರದನವರೆಗೆ) ಮಾಗಡಿ ರಸ್ತೆ, ಹೊಸ ವರ್ತುಲ ರಸ್ತೆ (ಗೊರಗುಂಟೆಪಾಳ್ಯ ಜಂಕ್ಷನ್‌ನಿಂದ ಸುಮನಹಳ್ಳಿ) ಗುಬ್ಬಿ ತೋಟದಪ್ಪ ರಸ್ತೆ, ಜಾಲಹಳ್ಳಿ ಕ್ರಾಸ್ ರಸ್ತೆ ಬಳಸುವರು ಪರ್ಯಾಯ ಮಾರ್ಗ ಬಳಸುವುದು ಒಳಿತು. ಇನ್ನು, ಬೆಳಗಿನ ಜಾವ 4 ಗಂಟೆಯಿಂದ 10 ಗಂಟೆ ವರೆಗೆ ನಗರದ ಒಳಗೆ ಭಾರೀ ಸರಕು ಸಾಗಾಣಿಕೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.