ನ್ಯೂಸ್

ಮುನ್ನೆಲೆಗೆ ಗಡಿ ಕೇಸ್, ರೆಡ್ಡಿಗೆ ಸಂಕಷ್ಟ: ಗಡಿ ಗುರುತು ಧ್ವಂಸ ಪ್ರಕರಣ ಇತ್ಯರ್ಥಕ್ಕೆ ಪ್ರಧಾನಿ ಕಚೇರಿ ಸೂಚನೆ

| ಶ್ರೀಕಾಂತ ಅಕ್ಕಿ ಬಳ್ಳಾರಿ

ಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿ 14 ವರ್ಷಗಳಿಂದ ವಿಚಾರಣೆಯಲ್ಲಿರುವ ಕರ್ನಾಟಕ-ಆಂಧ್ರ ಗಡಿ ಗುರುತು ಧ್ವಂಸ, ಒತ್ತುವರಿ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ಪ್ರಧಾನಿ ಕಚೇರಿ ಸೂಚನೆ ಮೇರೆಗೆ ಸರ್ವೆ ಆಫ್ ಇಂಡಿಯಾ, ಎರಡೂ ರಾಜ್ಯದ ಸರ್ವೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸರ್ವೆ ನಡೆಸಿ ಗಡಿ ಗುರುತಿಸುವಂತೆ ಸೂಚನೆ ನೀಡಿದೆ. ಈ ಕಾರ್ಯಕ್ಕಾಗಿ ಸರ್ವೆ ಆಫ್ ಇಂಡಿಯಾ ಎರಡು ತಿಂಗಳ ಗಡುವು ಕೇಳಿದೆ.

2006ರಲ್ಲಿ ಸಂಡೂರು ತಾಲೂಕಿನ ತುಮಟಿ, ಆಂಧ್ರದ ಓಬಳಾಪುರಂ ವ್ಯಾಪ್ತಿ ಗಡಿ ಗುರುತನ್ನು ನಾಶಪಡಿಸಿದ ಆರೋಪ ಮಾಜಿ ಸಚಿವ ಜನಾರ್ದನ ರೆಡ್ಡಿ ಮೇಲಿದೆ. ಅಕ್ರಮ ಗಣಿಗಾರಿಕೆ ಆರೋಪ ಸಂಬಂಧ ರೆಡ್ಡಿ ಷರತ್ತುಬದ್ಧ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

2018ರಲ್ಲಿ ಆರು ತಿಂಗಳೊಳಗೆ ಸರ್ವೆ ಕಾರ್ಯ ಮುಗಿಸಿ ಗಡಿ ಕಾರ್ಯವನ್ನು ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಮುಗಿಸಬೇಕೆಂದು ಸುಪ್ರಿಂ ಕೋರ್ಟ್ ಹೇಳಿತ್ತು. ನಿಗದಿಯಂತೆ ಗಡಿ ಗುರುತು ಪತ್ತೆ ಕಾರ್ಯ ನಡೆಯದ ಹಿನ್ನೆಲೆಯಲ್ಲಿ ಸದರಿ ಪ್ರಕ್ರರಣದ ಸಮಸ್ಯೆ ಬಗೆಹರಿಸುವಂತೆ ಪ್ರಧಾನಿ ಕಚೇರಿಗೆ ಆನ್​ಲೈನ್ ಮೂಲಕ ನಗರದ ಗಣಿ ಉದ್ಯಮಿ ಟಪಾಲ್ ಗಣೇಶ ಪತ್ರ ಬರೆದಿದ್ದರು. ಉಭಯ ರಾಜ್ಯಗಳ ಅಧಿಕಾರಿಗಳಿಂದ ಸರ್ವೆ ಮತ್ತು ಗಡಿ ಗುರುತಿಸುವಿಕೆ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದರು. ಈ ಪತ್ರಕ್ಕೆ ಸ್ಪಂದಿಸಿರುವ ಪ್ರಧಾನಿ ಕಚೇರಿ, ಆಂಧ್ರ-ಕರ್ನಾಟಕ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರಕರಣದ ಕುರಿತು ಮಾಹಿತಿ ಪಡೆದು ಸರ್ವೆ ನಡೆಸಿ ಗಡಿ ಗುರುತಿಸುವಂತೆ ಸೂಚಿಸಿದೆ.

ಚುರುಕಾದ ಅಧಿಕಾರಿಗಳು: ಪ್ರಧಾನಿ ಕಚೇರಿ ಸೂಚನೆ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ಸರ್ವೆ ಮತ್ತು ಕಂದಾಯ ಅಧಿಕಾರಿಗಳು ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಈಗಾಗಲೆ ಸರ್ವೆ ಕಾರ್ಯ ನಡೆಸಿರುವುದರಿಂದ ಗಡಿ ಗುರುತಿಸುವಿಕೆ ಕಾರ್ಯ ಮಾತ್ರ ಬಾಕಿ ಉಳಿದಿದೆ. ಗಡಿ ಗುರುತಿಸುವಿಕೆ ವೇಳೆ ಜನಾರ್ದನ ರೆಡ್ಡಿ, ಗಡಿ ಒತ್ತುವರಿ ಹಾಗೂ ಧ್ವಂಸ ಮಾಡಿರುವ ಆರೋಪ ರುಜುವಾತಾದರೇ ಮತ್ತೆ ಸಂಕಷ್ಟ ಎದುರಿಸುವ ಸಾಧ್ಯತೆಗಳಿವೆ.