ನ್ಯೂಸ್

ಕೇಂದ್ರ ಬಜೆಟ್​ಗೆ ಪ್ರಧಾನಿ ನರೇಂದ್ರ ಮೋದಿ ಪೂರ್ಣ ಅಂಕ; ನಿರ್ಮಲಾ ಸೀತಾರಾಮನ್​ ಮತ್ತು ತಂಡಕ್ಕೆ ಅಭಿನಂದನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಮಂಡನೆ ಮಾಡಿದ ಬಜೆಟ್​ನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇದೊಂದು ದೂರದೃಷ್ಟಿತ್ವವುಳ್ಳ ಬಜೆಟ್​ ಎಂದು ಹೇಳಿದ್ದಾರೆ.

ದೂರದೃಷ್ಟಿ ಹಾಗೂ ಕ್ರಿಯೆ ಎರಡೂ ಉಳ್ಳ ದಶಕದ ಮೊದಲ ಬಜೆಟ್​ನ್ನು ಮಂಡಿಸಿದ ನಿರ್ಮಲಾ ಸೀತಾರಾಮನ್​ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.

ಬಜೆಟ್​ನಲ್ಲಿ ಘೋಷಿಸಲಾದ ಸುಧಾರಣಾ ಕ್ರಮಗಳಿಂದ ಆರ್ಥಿಕತೆಯ ವೇಗ ಹೆಚ್ಚುತ್ತದೆ. ದೇಶದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುತ್ತದೆ. ಆರ್ಥಿಕತೆಗೆ ಭದ್ರ ಬುನಾದಿಯನ್ನು ಹಾಕಿಕೊಡುತ್ತದೆ. ಕೃಷಿ, ಮೂಲಸೌಕರ್ಯ, ಜವಳಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ತಂತ್ರಜ್ಞಾನ ವಲಯದ ಅಭಿವೃದ್ಧಿಗಾಗಿ ಸರ್ಕಾರ ತೆಗೆದುಕೊಂಡ ಕ್ರಮಗಳಿಂದ ಭಾರತ ಜಾಗತಿಕ ಮೌಲ್ಯ ಸರಪಳಿಯ ಒಂದು ಭಾಗವಾಗಲಿದೆ ಎಂದು ಹೇಳಿದ್ದಾರೆ.

ಹಾಗೇ ಲಾಭಾಂಶ ತೆರಿಗೆಯಲ್ಲಿ ಕಡಿತ ಮಾಡಿರುವ ಮತ್ತು ಸ್ಟಾರ್ಟ್​ ಅಪ್​, ರಿಯಲ್​ ಎಸ್ಟೇಟ್​ ವಲಯಗಳಿಗೆ ತೆರಿಗೆ ಪ್ರಯೋಜನಗಳನ್ನು ನೀಡಿದ್ದನ್ನು ಮೋದಿಯವರು ಸ್ವಾಗತಿಸಿದ್ದಾರೆ. ಈ ಬಜೆಟ್​ ಕನಿಷ್ಠ ಸರ್ಕಾರ, ಗರಿಷ್ಠ ಪ್ರಮಾಣದ ಆಡಳಿತ ಮಾದರಿಗೆ ಪೂರಕವಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)