ನವದೆಹಲಿ: ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಭಾರತ್ ಪರಿಕಲ್ಪನೆ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಕರೊನಾ ಮಹಾಮಾರಿಯಿಂದ ತತ್ತರಿಸುವ ಇಂದಿನ ದಿನಗಳಲ್ಲಿ ಈ ಪರಿಕಲ್ಪನೆ ಜನರಿಗೆ ಉತ್ತೇಜನ ನೀಡುತ್ತಿದೆ.
ಇದೇ ಪರಿಕಲ್ಪನೆಯಿಂದ ಸ್ಫೂರ್ತಿಗೊಂಡ 211 ಭಾರತೀಯ ಗಾಯಕರ ಹಕ್ಕುಗಳ ಸಂಘ (ಇಸ್ರಾ) ಸದಸ್ಯರು ಒಟ್ಟಿಗೆ ಸೇರಿ 'ಜಯತು ಜಯತು ಭಾರತಂ - ವಸುದೇವ್ ಕುಟುಂಬಕಂ' ಎಂಬ ಹೊಸ ಹಾಡಿನ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಈ ವೀಡಿಯೋ ನೋಡಿದ ಪ್ರಧಾನಿ ನರೇಂದ್ರ ಮೋದಿ ಅವರು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗಾಯಕಿ ಗಾಯಕಿ ಲತಾ ಮಂಗೇಶ್ಕರ್ ಅವರು ಪೋಸ್ಟ್ ಮಾಡಿದ ವೀಡಿಯೋ ಅನ್ನು ಅವರು ತಮ್ಮ ಖಾತೆಯಲ್ಲಿ ಹಂಚಿಕೊಂಡು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಮ್ಮನ ಬಳಿ ಹೋಗುವಂತಿಲ್ಲ, ಅಪ್ಪ ಯಾರು ಗೊತ್ತೇ ಇಲ್ಲ- ತಾಯಿಯ ಸ್ಪರ್ಶಕ್ಕೆ ಕಾದಿವೆ ಸಾವಿರಾರು ಕಂದಮ್ಮಗಳು…
ಪ್ರಸಿದ್ಧ ಗಾಯಕರಾದ ಎಸ್.ಪಿ, ಬಾಲಸುಬ್ರಹ್ಮಣ್ಯಂ, ಲತಾ ಮಂಗೇಶ್ಕರ್, ಸೋನು ನಿಗಮ್, ಶಂಕರ್ ಮಹಾದೇವನ್, ಆಶಾ ಭೋಸ್ಲೆ, ಉಷಾ ಉತ್ತುಪ, ಚಿತ್ರಾ, ಪ್ರಸೂನ್ ಜೋಶಿ, ವಸುಂಧರಾ ದಾಸ್ ಸೇರಿದಂತೆ, ಕನ್ನಡದ ಖ್ಯಾತ ಹಿನ್ನೆಲೆ ಗಾಯಕರಾಗಿರುವ ಬಿ ಆರ್ ಛಾಯಾ, ವಿಜಯ್ ಪ್ರಕಾಶ್, ಸಂಗೀತಾ ಕಟ್ಟಿ, ಶಮಿತಾ ಮಲ್ನಾಡ್ ಸೇರಿದಂತೆ ಅನೇಕ ಮಂದಿ ಇದಕ್ಕೆ ದನಿಗೂಡಿಸಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ಮನೆಯಲ್ಲಿಯೇ ಕುಳಿತು ರೆಕಾರ್ಡಿಂಗ್ ಮಾಡಿ ಕಳುಹಿಸಿರುವುದು ವಿಶೇಷ. ಈ ಹಾಡನ್ನು ಪ್ರಸೂನ್ ಜೋಶಿ ಬರೆದಿದ್ದು, ಶಂಕರ್ ಮಹಾದೇವನ್ ಸಂಗೀತ ಸಂಯೋಜಿಸಿದ್ದಾರೆ.
ಈ ಹಾಡು ಎಲ್ಲರನ್ನೂ ರೋಮಾಂಚನಪಡಿಸುವುದು ಮಾತ್ರವಲ್ಲದೇ ಕರೊನಾ ವೈರಸ್ನ ಈ ದಿನಗಳಲ್ಲಿ ಜನರಲ್ಲಿ ಆತ್ಮವಿಶ್ವಾಸವನ್ನೂ ಮೂಡಿಸುತ್ತದೆ. ಇದು 'ಆತ್ಮ ನಿರ್ಭರ್' ಭಾರತಕ್ಕೆ ಒಂದು ಸುಮಧುರ ಸಂದೇಶವನ್ನೂ ನೀಡುತ್ತದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಲತಾ ಮಂಗೇಶ್ಕರ್ ಅವರು ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದು, ಭಾರತದ 'ಆತ್ಮ ನಿರ್ಭರ್' ಭಾರತದ ಸ್ಫೂರ್ತಿಯಿಂದ ಪ್ರೇರೇಪಿತರಾಗಿ ನಮ್ಮ ಇಸ್ರಾದ ಪ್ರತಿಭಾನ್ವಿತ ಗಾಯಕರು ಒಗ್ಗೂಡಿ ಈ ಹಾಡನ್ನು ರಚಿಸಿದ್ದಾರೆ. ಈ ಹಾಡನ್ನು ಭಾರತದ ಜನರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮರ್ಪಿಸಲಾಗಿದೆ ಎಂದು ಹೇಳಿದ್ದಾರೆ.
'ಇಸ್ರಾ' ಸದಸ್ಯರು ಒಟ್ಟಿಗೆ ಸೇರಿ ಆತ್ಮ ನಿರ್ಭರ್ ಭಾರತದ ಸ್ಫೂರ್ತಿಗೆ ಸುಮಧುರ ಗೀತೆಯ ಮೂಲಕ ವಂದನೆಗಳನ್ನು ಸಲ್ಲಿಸಿರುವ ಅತಿದೊಡ್ಡ ಗೀತೆ ಎನ್ನಲಾಗಿದೆ. ಈ ವಿಡಿಯೊದಲ್ಲಿ ಆರೋಗ್ಯ ಕಾರ್ಯಕರ್ತರಾದ ಕೋವಿಡ್-19 ಯೋಧರ ಕೆಲ ದೃಶ್ಯ ತುಣುಕುಗಳೂ ಇವೆ. ಕೊನೆಯಲ್ಲಿ ನರೇಂದ್ರ ಮೋದಿ ದೀಪ ಬೆಳಗಿಸುತ್ತಿರುವ ಕ್ಲಿಪ್ ಸೇರಿಸಲಾಗಿದೆ. (ಏಜೆನ್ಸೀಸ್)