ಕಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಪ್ರಯುಕ್ತ ಕಲ್ಕತ್ತದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಬಿಜೆಪಿ ಭಾನುವಾರ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು, ತಮ್ಮ ಹರಿತ ಮಾತುಗಳಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಕೆಣಕಿದ್ದಾರೆ.
'ದೀದಿ ಮತ್ತು ಅವರ ಅನುಯಾಯಿಗಳಿಂದ ಪಶ್ಚಿಮ ಬಂಗಾಳದ ಜನರ ಕನಸು, ಆಸೆ ನುಚ್ಚು ನೂರಾಗಿವೆ. ಅವರಿಂದಾಗಿ ಬಂಗಾಳದ ಬೆಳವಣಿಗೆ ಕುಂಠಿತವಾಗಿದೆ. ಬಂಗಾಳದ ಜನ ದೀದಿಯನ್ನು ನಂಬಿದ್ದಕ್ಕೆ ಅವರು ಕೊಟ್ಟ ಉಡುಗೊರೆ ಇದಾಗಿದೆ' ಎಂದು ಮೋದಿ ಮಮತಾ ಬ್ಯಾನರ್ಜಿಯನ್ನು ಉಲ್ಲೇಖಿಸಿ ಹೇಳಿದರು.
'ಬಂಗಾಳದ ಜನ ನಿಮ್ಮನ್ನು ದೀದಿ (ಅಕ್ಕ) ಎಂದು ಕರೆಯುತ್ತಾರೆ. ಆದರೆ, ನೀವು ನಿಮ್ಮ ಅಳಿಯನಿಗೆ ಮಾತ್ರ ಅತ್ತೆಯಾಗಿ ಉಳಿದಿರಿ ಎಂದು ವ್ಯಂಗ್ಯವಾಡಿದ ಮೋದಿ, ಕಲ್ಕತ್ತ ಭಾರತದ ಭವಿಷ್ಯದ ನಗರವಾಗಿ ಬೆಳೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
'ಮಹಿಳಾ ಸುರಕ್ಷತೆಗಾಗಿ ರಾಜ್ಯದಲ್ಲಿ ಟಿಎಂಸಿ ಸರ್ಕಾರ ಏನೂ ಮಾಡಿಲ್ಲ. ರಾಜಕೀಯ ಹತ್ಯೆಗಳಿಂದ ಅನೇಕ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಬಂಗಾಳದ ತಾಯಂದಿರು ಕಣ್ಣೀರು ಸುರಿಸಿದ್ದಾರೆ' ಎಂದು ಪಿಎಂ ಮೋದಿ ಹೇಳಿದರು. 'ಪಶ್ಚಿಮ ಬಂಗಾಳಕ್ಕೆ ಶಾಂತಿ, ಸುವ್ಯವಸ್ಥೆ ಮತ್ತು ಅಭಿವೃದ್ಧಿ ಬೇಕಾಗಿದೆ. 2047 ರಲ್ಲಿ ಪಶ್ಚಿಮ ಬಂಗಾಳ ಮತ್ತೆ ದೇಶವನ್ನು ಮುನ್ನಡೆಸಲಿದೆ' ಎಂದು ಪಿಎಂ ಹೇಳಿದರು.
ಅಲ್ಲದೇ ಇತ್ತೀಚೆಗೆ ತೈಲ ದರ ಏರಿಕೆ ವಿರುದ್ಧ ಎಲೆಕ್ಟ್ರಿಕ್ ಸ್ಕೂಟರ್ ಏರಿದ್ದ ಮಮತಾ ಬ್ಯಾನರ್ಜಿ ಬಗ್ಗೆ ವ್ಯಂಗ್ಯವಾಡಿದ ಮೋದಿ, 'ಇದ್ದಕ್ಕಿದ್ದಂತೆ ದೀದಿ ಅವರ ಸ್ಕೂಟರ್ ನಂದಿಗ್ರಾಮದತ್ತ ಹೊರಳಿದ್ದೇಕೆ?' (ನಂದಿಗ್ರಾಮ ವಿಧಾನಸಭೆಯಿಂದ ದೀದಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ) ಎಂದು ಪ್ರಶ್ನಿಸಿದರು. ಬಂಗಾಳ ವಿಧಾನಸಭೆ ಚುನಾವಣೆ ಪ್ರಯುಕ್ತ ಬಿಜೆಪಿ ಆಯೋಜಿಸಿರುವ ಮೊದಲನೇ ಬೃಹತ್ ಸಮಾವೇಶ ಇದಾಗಿದೆ.