ಬೆಂಗಳೂರು: ಲೋಕಸಭಾ ಚುನಾವಣೆಯ ಪ್ರಚಾರ ಕಾವೇರುತ್ತಿದೆ. ಮತದಾರ ಪ್ರಭುಗಳ ಓಲೈಕೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು, ಅಭ್ಯರ್ಥಿಗಳು, ಆಯಾ ಪಕ್ಷದ ಕಾರ್ಯಕರ್ತರು ಬಿರುಸಿನ ಓಡಾಟ ಶುರು ಮಾಡಿದ್ದಾರೆ. ಈ ನಡುವೆ ಮತಬೇಟೆಗಾಗಿ ಏ.14ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರಲಿದ್ದಾರೆ.
ಮೋದಿಯವರ ಎರಡನೇ ಸುತ್ತಿನ ಚುನಾವಣಾ ಪ್ರಚಾರ ಇದಾಗಲಿದೆ. ಮೊದಲ ಹಂತದಲ್ಲಿ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾದ ದಿನವೇ ಕಲಬುರಗಿ ಹಾಗೂ ಶಿವಮೊಗ್ಗದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಉತ್ತಮ ಜನಸ್ಪಂದನೆ ಲಭಿಸಿದ್ದರಿಂದ ಕೇಸರಿಪಡೆ ಖುಷಿಯಾಗಿದೆ.
ಡಾ.ಕೆ.ಸುಧಾಕರ್ ಸ್ಪರ್ಧಿಸಿರುವ ಚಿಕ್ಕಬಳ್ಳಾಪುರ ಹಾಗೂ ಶೋಭಾ ಕರಂದ್ಲಾಜೆ ಸ್ಪರ್ಧಿಸಿರುವ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ರೋಡ್ ಶೋ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ದೇವನಹಳ್ಳಿಯಲ್ಲಿ ಸಾರ್ವಜನಿಕ ಸಭೆ ಆಯೋಜನೆಗೆ ಪಕ್ಷ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.
ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಎರಡು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡು ರೋಡ್ ಶೋ ನಡೆಸಲು ಪಕ್ಷ ಯೋಚಿಸಿದೆ. ಆದರೆ ಪ್ರಧಾನಮಂತ್ರಿ ಕಚೇರಿ ಸೂಚನೆಯನ್ವಯ ಮೋದಿ ಪ್ರವಾಸ, ಪ್ರಚಾರದರೀತಿ, ಸ್ಥಳ ಹಾಗೂ ದಿನಾಂಕ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.