ನ್ಯೂಸ್

ದೇಶಾದ್ಯಂತ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷೆಯಲ್ಲೇ ದೊರೆಯಲಿ; ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

ಬೆಂಗಳೂರು: ಸುಲಭ ಅರ್ಥೈಕೆ, ಸಂಸ್ಕೃತಿ ಬೆಳೆವಣಿಗೆ ದೃಷ್ಟಿಯಿಂದ ದೇಶಾದ್ಯಂತ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷೆಯಲ್ಲೇ ದೊರೆಯಬೇಕು. ಉಪರಾಷ್ಟ್ರಪತಿಯಾಗಿ ಇದನ್ನು ‘ಮಿಷನ್’ ರೀತಿ ತೆಗೆದುಕೊಂಡು ಹೋಗಲು ತೀರ್ಮಾನಿಸಿದ್ದೇನೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.

ರಾಜಭವನದಲ್ಲಿ ‘ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್’ (ನ್ಯಾಕ್) ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾತೃಭಾಷೆ ನಮ್ಮ ಕಣ್ಣಿನ ದೃಷ್ಟಿಯಂತೆ. ದೃಷ್ಟಿ ಚೆನ್ನಾಗಿದ್ದರೆ ಹಾಕಿದ ಕನ್ನಡಕ ಕೆಲಸ ಮಾಡುತ್ತದೆ. ದೃಷ್ಟಿಯೇ ಸರಿ ಇಲ್ಲದಿದ್ದರೆ ಸಾವಿರಾರು ರೂ. ವೆಚ್ಚ ಮಾಡಿ ರೇಬಾನ್ ಗ್ಲಾಸ್ ಹಾಕಿದರೂ ವ್ಯರ್ಥ. ಬೇರೆ ಭಾಷೆಗಳನ್ನು ಕಲಿಯುವುದು ಬೇಡವೆಂದು ಹೇಳುವುದಿಲ್ಲ. ಆದರೆ, ಮಾತೃಭಾಷೆಯನ್ನು ನಿರ್ಲಕ್ಷ್ಯ ಮಾಡಬೇಡಿ ಎಂದರು.

ಪ್ರಾಥಮಿಕ ಶಿಕ್ಷಣ ನಂತರ ಉನ್ನತ ಶಿಕ್ಷಣವನ್ನೂ ಮಾತೃಭಾಷೆಯಲ್ಲಿ ಕಲಿಸಲು ಮುಂದಾಗಬೇಕು. ಭಾಷೆಗೆ ಭಾವನೆಯ ಸಂಬಂಧವಿದೆ. ತಾಯಿಯ ಗರ್ಭದಲ್ಲಿದ್ದಾಗ ಕೇಳಿದ ಭಾಷೆಯಿಂದಲೇ ಪ್ರಾಥಮಿಕ ಶಿಕ್ಷಣ ಕಲಿಯಬೇಕು. ಈ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಕನ್ನಡ, ತೆಲುಗು, ಮರಾಠಿ, ಅಸ್ಸಾಮಿ, ಗುಜರಾತಿ, ತಮಿಳು, ಬೋಜ್​ಪುರಿ, ಕಾಶ್ಮೀರಿ, ಉರ್ದು ಭಾಷೆಗಳಲ್ಲಿ ಆಯಾ ಭಾಗದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡಬೇಕು ಎಂದು ತಿಳಿಸಿದರು. ನೀವು ಎಲ್ಲೆ ಇರಿ, ಹೇಗೆ ಇರಲಿ, ನಿಮ್ಮ ಮಾತೃಭಾಷೆ ಮಾತ್ರ ಮರೆಯಬೇಡಿ.

ಕರ್ನಾಟಕ್ಕೆ ಇಂಗ್ಲಿಷ್ ಜನರು ಆಳಲು ಬಂದರು. ನಮ್ಮ ನೆಲದ ಭಾಷೆಯನ್ನು ಕಲಿಯದೆ ನಿಮ್ಮನ್ನು ಅವರ ಭಾಷೆ ಕಲಿಯುವಂತೆ ಮಾಡಿದರು. ಅವರು ಎಲ್ಲಿಗೆ ಹೋದರೋ ಎಲ್ಲ ಕಡೆಯೂ ಅವರ ಭಾಷೆಯನ್ನು ಬೇರೆಯವರು ನಂಬುವಂತೆ ಮಾಡಿದರು. ಲ್ಯಾಟಿನ್ ಅಮೆರಿಕದಲ್ಲಿ ಸ್ಪ್ಯಾನಿಷ್, ಇಂಗ್ಲಿಷ್ ಬಂದ ಬಳಿಕ ಅವರ ಮಾತೃಭಾಷೆಗಳು ನಿರ್ನಾಮ ಆಗಿವೆ. ಅಂತಹ ದೌರ್ಭಾಗ್ಯದ ಸ್ಥಿತಿ ನಮಗೆ ಬರುವುದು ಬೇಡ. ಮಾತೃಭಾಷೆಯನ್ನು ಉಳಿಸಿ ಬೆಳೆಸಿ ಎಂದು ವೆಂಕಯ್ಯ ನಾಯ್ಡು ಮನವಿ ಮಾಡಿದರು. ನ್ಯಾಕ್ ನಿರ್ದೇಶಕ ಎಸ್.ಸಿ.ಶರ್ವ ಇದ್ದರು.

ಬಿ, ಸಿ ಗ್ರೇಡ್ ಶಿಕ್ಷಣ ಸಂಸ್ಥೆಗಳಿಗೆ ಬೀಗ ಹಾಕಿ

ನ್ಯಾಕ್ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ರ್ಯಾಂಕ್ ನೀಡುತ್ತಿದೆ. ಬಿ, ಸಿ ಶ್ರೇಣಿ ಪಡೆದ ಶಿಕ್ಷಣ ಸಂಸ್ಥೆಗಳು ಬಾಗಿಲು ಮುಚ್ಚಿಕೊಳ್ಳುವುದೇ ಲೇಸು ಎಂದು ರಾಜ್ಯಪಾಲ ವಿ.ಆರ್.ವಾಲಾ ತಿಳಿಸಿದರು. ಇಂತಹ ಶ್ರೇಣಿ ಪಡೆದುಕೊಳ್ಳಬೇಕಾದರೆ, ಒಂದು ವಿದ್ಯಾರ್ಥಿಗಳು ವ್ಯಾಸಂಗ ಮಾಡದಿರಬಹುದು, ಇಲ್ಲವೇ ಅಲ್ಲಿನ ಪ್ರೊಫೆಸರ್​ಗಳು ಉತ್ತಮ ರೀತಿಯಲ್ಲಿ ಬೋಧನೆ ಮಾಡದಿರಬಹುದು. ಕಡಿಮೆ ರ್ಯಾಂಕ್ ಪಡೆದವರು ವಿಚಾರ ಮಾಡಿ, ನಿಮ್ಮ ಕಾಲೇಜು ಇರುವುದರಿಂದ ಯಾರಿಗೆ ಉದ್ಧಾರವಾಗಲಿದೆ? ಎಂದರು.

ಇಂದಿಗೂ ನಾವು ಫ್ರಾನ್ಸ್ ತಯಾರಿಸುವ ತಂತ್ರೋಪಕರಣಗಳ ಮೇಲೆ ಬಿಂಬಿತರಾಗಿದ್ದೇವೆ. ಇದು ಹೋಗಬೇಕಾದರೆ, ವಿದ್ಯಾರ್ಥಿಗಳು ಸಂಶೋಧನೆಗಳ ಮೂಲಕ ಹೊಸ ಉಪಕರಣಗಳನ್ನು ರೂಪಿಸಬೇಕು. ದೇಶದಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಿಂದ ಅಸಾಧ್ಯವಾಗಿದ್ದನ್ನು ಸಾಧ್ಯವಾಗಿಸುವ ಶಕ್ತಿ ಇದೆ ಎಂದು ಹೇಳಿದರು.

ಜಂಕ್​ಫುಡ್ ಬಿಡಿ

ನನಗೆ ದೇಸಿಯ ಅಡುಗೆ ತುಂಬಾ ಇಷ್ಟ. ಮೊದಲು ಜನಾರ್ದನ ಹೊಟೇಲ್​ಗೆ ಹೋಗಿ ದೋಸೆ ತಿನ್ನುತ್ತಿದ್ದೆ. ಇವತ್ತು ಅಲ್ಲಿಂದಲೇ ಬಾಣಸಿಗನನ್ನು ಕರೆಯಿಸಿ ರಾಜಭವನದಲ್ಲಿ ದೋಸೆ ಹಾಕಿಸಿಕೊಂಡು ತಿಂದಿದ್ದೇನೆ. ಮುದ್ದೆ, ನಾಟಿಕೋಳಿ ಸಾರು ಸೂಪರ್. ಮಕ್ಕಳಿಗೆ ಜಂಕ್ ಫುಡ್​ಗಳಿಂದ ದೂರವಿರುವುದುನ್ನು ಕಲಿಸಿ ದೇಸಿಯ ಅಹಾರ ಸೇವನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಎಂದು ಉಪರಾಷ್ಟ್ರಪತಿ ಸಲಹೆ ನೀಡಿದರು.

ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು

ವಿಶ್ವದ ಮೊದಲ 200 ವಿಶ್ವವಿದ್ಯಾಲಯಗಳಲ್ಲಿ ನಮ್ಮ ಒಂದೂ ವಿಶ್ವವಿದ್ಯಾಲಯ ಸ್ಥಾನ ಪಡೆದಿಲ್ಲ. ನಮ್ಮಲ್ಲಿ ವಿಶ್ವವಿದ್ಯಾಲಯಗಳು ಹೆಚ್ಚುತ್ತಿವೆ. ಆದರೆ ಗುಣಮಟ್ಟ ಹೆಚ್ಚಾಗುತ್ತಿಲ್ಲ. ನಳಂದಾ, ತಕ್ಷಶಿಲಾ ಕಾಲದಲ್ಲಿ ವಿಶ್ವಕ್ಕೆ ಮಾದರಿಯಾಗಿದ್ದ ನಮ್ಮ ಶಿಕ್ಷಣ ವ್ಯವಸ್ಥೆ ಈಗ ಎಲ್ಲಿದೆ ಎಂಬುದನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕು. ಯುಜಿಸಿ ಉತ್ತಮ ವೇತನ ನೀಡುತ್ತಿದ್ದರೂ ಉತ್ತಮ ಶಿಕ್ಷಣ ಸಿಗುತ್ತಿಲ್ಲವೆಂದರೆ ಉಪನ್ಯಾಸಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ವೆಂಕಯ್ಯ ನಾಯ್ಡು ಹೇಳಿದರು.