ಶಿವಮೊಗ್ಗ : ಶಿಮುಲ್ (ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಉತ್ಪಾದಕರ ಒಕ್ಕೂಟ) ಸದೃಢವಾಗಿರಲು ಪ್ರಾಥಮಿಕ ಹಾಲು ಉತ್ಪಾದಕ ಸಂಘಗಳು ಬಲಿಷ್ಠವಾಗಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡ ಅಭಿಪ್ರಾಯಪಟ್ಟರು.
ಮಾಚೇನಹಳ್ಳಿ ಶಿಮುಲ್ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್‌ನಿಂದ ಹಾಲು ಒಕ್ಕೂಟದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶನಿವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಹಾಲು ಉತ್ಪಾದಕರ ಸಂಘಗಳ ವ್ಯವಸ್ಥೆ ಸಾಕಷ್ಟು ಸುಧಾರಣೆಯಾಗಬೇಕು. ಅಧಿಕಾರಿಗಳು, ಸಿಬ್ಬಂದಿ, ಈ ಬಗ್ಗೆ ಹೆಚ್ಚು ಗಮನ ನೀಡಬೇಕು. ಪ್ರಾಥಮಿಕ ಹಾಲು ಉತ್ಪಾದಕ ಸಂಘಗಳು ಉಳಿದರೆ ಮಾತ್ರ ಕೆಎಂಎಫ್ ಹಾಗೂ ನಂದಿನಿ ಬ್ರಾೃಂಡ್ ಉಳಿಯಲು ಸಾಧ್ಯ ಎಂದರು.
ನಂದಿನಿ ಮಿಲ್ಕ್ ಪಾರ್ಲರ್‌ಗಳು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಶಿಮುಲ್‌ನಿಂದ ತೆರೆಯಲಾಗಿರುವ ಪಾರ್ಲರ್‌ಗಳ ಗುಣಮಟ್ಟದ ಪರಿಶೀಲನೆಯಾಗಬೇಕು. ಒಕ್ಕೂಟದ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಮಿಲ್ಕ್ ಪಾರ್ಲರ್ ಸ್ಥಾಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.
ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಹಾಲು ಉತ್ಪಾದಕರ ಕೊಡುಗೆ ಅಪಾರವಾಗಿದೆ. ಅವರ ಜೀವನಮಟ್ಟ ಸುಧಾರಿಸುವುದರ ಜತೆಗೆ ಸಂಸ್ಥೆಯ ಬೆಳವಣಿಗೆಯೂ ಮುಖ್ಯ. ವರ್ಗಿಸ್ ಕುರಿಯನ್ ಅವರು ಹಾಕಿದ ಅಡಿಪಾಯದಿಂದ ಅಮುಲ್ ಬೃಹತ್ ಸಂಸ್ಥೆಯಾಗಿ ಬೆಳೆಯಿತು. ನಂದಿನಿ ಕೂಡ ದೊಡ್ಡ ಬ್ರಾೃಂಡ್ ಆಗಿ ಬೆಳೆದಿದೆ ಎಂದರು.
ಉತ್ಪಾದನೆ, ಮಾರುಕಟ್ಟೆ ನಿರ್ವಹಣೆಗೆ ಬೇಕಾದ ತರಬೇತಿಗಳನ್ನು ಒದಗಿಸಬೇಕು. ಕಾನೂನುಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು. ಬೈಲಾಗಳ ಬಗ್ಗೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಲು ತರಬೇತಿ ಅವಶ್ಯಕ. ಪ್ರತಿಯೊಂದು ಆಡಳಿತ ಮಂಡಳಿಗಳಿಗೆ ಉಪವಿಧಿ ಕಾಯ್ದೆಗಳ ಕುರಿತು ಪ್ರಾಥಮಿಕ ಜ್ಞಾನ ಇರಬೇಕು ಎಂದು ಹೇಳಿದರು.
ಸಹಕಾರ ಯೂನಿಯನ್ ಜಿಲ್ಲಾಧ್ಯಕ್ಷ ಸುರೇಶ್ ವಾಟಗೋಡು, ಶಿಮುಲ್ ಅಧ್ಯಕ್ಷ ಎಚ್.ಎನ್.ವಿದ್ಯಾಧರ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಶಿಮುಲ್ ನಿರ್ದೇಶಕರಾದ ಡಿ.ಆನಂದ್, ಎಚ್.ಬಿ.ದಿನೇಶ್, ಟಿ.ಎಸ್.ದಯಾನಂದ ಗೌಡ, ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ಮುಂತಾದವರಿದ್ದರು.