ದೀಪಾವಳಿ ಹಬ್ಬದ ವೇಳೆ ಹಾಲು ಹಾಗೂ ಬಸ್ ದರ ಏರಿಕೆಯಿಂದ ಜನಸಾಮಾನ್ಯರು ಕಂಗಾಲು
ಸರ್ಕಾರಿ ಬಸ್‌ಗಳಲ್ಲಿ ಶೇ.23-35 ದರ ಹೆಚ್ಚಳ; ಖಾಸಗಿ ಟ್ರಾವೆಲ್ಸ್ ಟಿಕೆಟ್ ದರ 3,500 ರೂ. ವರೆಗೆ ಏರಿಕೆ.
ಮೆಜೆಸ್ಟಿಕ್, ಗೊರಗುಂಟೆಪಾಳ್ಯ ಹಾಗೂ ಪ್ರಮುಖ ರೈಲು ನಿಲ್ದಾಣಗಳಲ್ಲಿ ಹರಿದುಬಂದ ಪ್ರಯಾಣಿಕರ ಸಾಗರ
ತುಮಕೂರು ರಸ್ತೆ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್, 2-3 ಗಂಟೆ ತಡವಾಗಿ ಬರುತ್ತಿರುವ ಬಸ್‌ಗಳು
Deepavali travel rush Bengaluru: ಬೆಳಕಿನ ಹಬ್ಬ ದೀಪಾವಳಿ ಆಚರಿಸಲು ರಾಜಧಾನಿ ಬೆಂಗಳೂರಿನಿಂದ ಸ್ವಂತ ಊರುಗಳಿಗೆ, ವಿಶೇಷವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಹೊರಟಿರುವ ಜನಸಾಮಾನ್ಯರಿಗೆ ಈ ಬಾರಿ ಪ್ರಯಾಣ ಅತ್ಯಂತ ದಣಿವು ಮತ್ತು ಭಾರಿ ಆರ್ಥಿಕ ಹೊರೆಯನ್ನು ತಂದೊಡ್ಡಿದೆ. ಹಬ್ಬದ ಸಂದರ್ಭದಲ್ಲೇ ಹಾಲು ಹಾಗೂ ಬಸ್ ದರ ಏರಿಕೆಯಾಗಿರುವುದು ಪ್ರಯಾಣಿಕರಿಗೆ, ಅದರಲ್ಲೂ ಪುರುಷರು ಮತ್ತು ಕೂಲಿ ಕಾರ್ಮಿಕರಿಗೆ ದೊಡ್ಡ ಆಘಾತ ನೀಡಿದೆ.
ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರೋದ್ರಿಂದ, ಫ್ಯಾಮಿಲಿ ಜತೆ ಹೊರಟ ಪುರುಷರು ಮತ್ತು ಗಂಡು ಮಕ್ಕಳಿಗೆ ಟಿಕೆಟ್ ದರ ಭಾರಿ ಹೊರೆಯಾಗಿದೆ. ಬಸ್ ದರ ಶೇ.23 ರಿಂದ 35 ರಷ್ಟು ಹೆಚ್ಚಾಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಇದರ ಲಾಭ ಪಡೆದ ಖಾಸಗಿ ಟ್ರಾವೆಲ್ಸ್‌ನವರು ಹುಬ್ಬಳ್ಳಿ, ಬೆಳಗಾವಿ, ಕಲಬುರಗಿಗೆ 2,000 ರೂ. ರಿಂದ 3,500 ರೂ. ವರೆಗೆ ದರ ಏರಿಸಿದ್ದು ಬಡ ಹಾಗೂ ಮಧ್ಯಮ ವರ್ಗದವರನ್ನು ಕಂಗಾಲು ಮಾಡಿದೆ.
ಮೆಜೆಸ್ಟಿಕ್, ಗೊರಗುಂಟೆಪಾಳ್ಯ, ಯಶವಂತಪುರ ಹಾಗೂ ವಿಜಯನಗರ ಬಸ್ ಸ್ಟ್ಯಾಂಡ್‌ಗಳಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಜನ ತುಂಬಿಹೋಗಿದ್ದಾರೆ. ಕೆಎಸ್‌ಆರ್‌ಟಿಸಿ 2,600 ಮತ್ತು ವಾಯವ್ಯ ಸಾರಿಗೆ 340 ಹೆಚ್ಚುವರಿ ಬಸ್‌ಗಳನ್ನು ಬಿಟ್ಟಿದ್ದರೂ, ಬಸ್‌ಗಳು ಟೈಮ್‌ಗೆ ಸಿಗದೆ ಪ್ರಯಾಣಿಕರು ಲಗೇಜ್ ಹಾಗೂ ಮಕ್ಕಳೊಂದಿಗೆ ಗಂಟೆಗಟ್ಟಲೆ ನಿಂತೇ ಕಾಯುವಂತಾಗಿದೆ.
ಬೆಂಗಳೂರಿನಿಂದ ಹೊರಹೋಗೋ ತುಮಕೂರು ರಸ್ತೆ ಹಾಗೂ ಹೊಸೂರು ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸಿಟಿ ಒಳಗಿನ ಸಿಗ್ನಲ್ ಜಾಮ್ ಮತ್ತು ಹೆದ್ದಾರಿ ಟ್ರಾಫಿಕ್‌ನಿಂದಾಗಿ ಡಿಪೋಗಳಿಂದ ಬಸ್ ಸ್ಟ್ಯಾಂಡ್‌ಗೆ ಬರಬೇಕಾದ ಬಸ್‌ಗಳು 2 ರಿಂದ 3 ಗಂಟೆ ತಡವಾಗುತ್ತಿದ್ದು, ರಾತ್ರಿ ವೇಳೆ ಪ್ರಯಾಣಿಕರು ಪರದಾಡುವಂತಾಗಿದೆ
ಬಸ್ ದರ ಏರಿಕೆಯ ಬಿಸಿಯಿಂದ ತಪ್ಪಿಸಿಕೊಳ್ಳಲು ಜನರು ರೈಲುಗಳತ್ತ ಓಡುತ್ತಿದ್ದಾರೆ. ಪರಿಣಾಮವಾಗಿ ಮೆಜೆಸ್ಟಿಕ್, ಯಶವಂತಪುರ ಹಾಗೂ ಬೈಯಪ್ಪನಹಳ್ಳಿ ಎಸ್‌ಎಮ್‌ವಿಟಿ ರೈಲು ನಿಲ್ದಾಣಗಳಲ್ಲಿ ಜನಸಾಗರವೇ ನೆರೆದಿದೆ. ಜನರಲ್ ಬೋಗಿಗಳನ್ನು ಹತ್ತಲು ಉಚಿತ, ಸಾಮಾನ್ಯ ಟಿಕೆಟ್ ಪಡೆದ ಪ್ರಯಾಣಿಕರು ಸರ್ಕಸ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಒಟ್ಟಾರೆಯಾಗಿ, ಸಾಲು ಸಾಲು ಬೆಲೆ ಏರಿಕೆಯ ಬಿಸಿಯ ನಡುವೆಯೂ ಹಬ್ಬಕ್ಕೆ ಊರು ಸೇರಲೇಬೇಕಾದ ಅನಿವಾರ್ಯತೆಯಲ್ಲಿರುವ ಜನರಿಗೆ ಈ ಬಾರಿಯ ದೀಪಾವಳಿ ಪ್ರಯಾಣವು ಆರ್ಥಿಕವಾಗಿ ಭಾರಿ ಹೊರೆಯಾಗಿದ್ದು, ತೀವ್ರ ಆಯಾಸ ತಂದೊಡ್ಡಿದೆ.