ಬೆಂಗಳೂರು: ಬೆಲೆ ಏರಿಕೆ ಮತ್ತು ಕೇಂದ್ರ ಸರಕಾರವನ್ನು ಟೀಕಿಸುವುದು ಈ ಕಾಂಗ್ರೆಸ್ ಸರ್ಕಾರದ ಅಜೆಂಡಾ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‍ಕುಮಾರ್ ಅವರು ಟೀಕಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರವು ಆರಂಭದ ದಿನದಿಂದಲೂ ಜನಪರ ಯೋಜನೆಗಳನ್ನು ಮಾಡಲೇ ಇಲ್ಲ ಎಂದು ಆಕ್ಷೇಪಿಸಿದರು.
ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಸರ್ಕಾರದಲ್ಲಿ ಒಂದು ರೀತಿಯ ರಾಜಕೀಯ ಅಸ್ಥಿರತೆ ಕಾಣುತ್ತಿದೆ.
ಸ್ವತಃ ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳಲು ಪ್ರಯತ್ನದಲ್ಲಿದ್ದಾರೆ. ಸಿಎಂ ಸೇರಿ ಉಳಿದೆಲ್ಲ ಸಚಿವರೂ ಜನಕಲ್ಯಾಣದ ಯೋಜನೆಗಳನ್ನು ಕೈಬಿಟ್ಟಿದ್ದು, ಕೋಮಾ ಪರಿಸ್ಥಿತಿಯಲ್ಲಿ ಸರ್ಕಾರ ಇದೆ. ಸಚಿವರು ಜಿಲ್ಲಾ ಪ್ರವಾಸ ನಡೆಸುತ್ತಿಲ್ಲ; ಸಭೆಗಳನ್ನೂ ನಡೆಸುತ್ತಿಲ್ಲ ಎಂದು ಆಕ್ಷೇಪಿಸಿದರು.
ಜನರ ಬವಣೆಗಳನ್ನು ಕೇಳದೇ ಇರುವ ಸ್ಥಿತಿ ಎಲ್ಲ ಜಿಲ್ಲೆ, ಎಲ್ಲ ತಾಲ್ಲೂಕುಗಳಲ್ಲಿದೆ. ಸರಕಾರವೊಂದು ಜೀವಂತವಾಗಿದೆ ಎಂದು ಅನಿಸುತ್ತಿಲ್ಲ. ಆಡಳಿತ ಪಕ್ಷದ ಸದಸ್ಯರೇ ಬೇರೆಬೇರೆ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಜನರ ಪರವಾಗಿ ಯೋಚಿಸದ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾದುದು ಶೋಚನೀಯ ಎಂದು ಸುನಿಲ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಪತನ ಆಗಬೇಕೆಂದು ನಾವು ಬಯಸುತ್ತಿಲ್ಲ. ಗುರುತರ ಆರೋಪಕ್ಕೆ ಒಳಗಾದ ಮುಖ್ಯಮಂತ್ರಿಗಳು ತನಿಖೆ ಮುಗಿಯುವವರೆಗೆ ರಾಜೀನಾಮೆ ಕೊಡಬೇಕು ಹಾಗೂ ತನಿಖೆ ಎದುರಿಸಲಿ ಎಂದು ನಾವು ಆಗ್ರಹಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.