ಶಿವಮೊಗ್ಗ: ಕಾನೂನು ಪಾಲನೆ, ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ಸುಧಾರಿಸುವುದು ಮತ್ತು ಯುವ ಜನತೆಯಲ್ಲಿ ಅರಿವು ಮೂಡಿಸುವ ಮೂಲಕ ಹೆಣ್ಣು ಭ್ರೂಣ ಹತ್ಯೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯ ಎಂದು ಕ್ಷೇಮ ಟ್ರಸ್ಟ್ ಅಧ್ಯಕ್ಷ ಡಾ. ಕೆ.ಆರ್.ಶ್ರೀಧರ್ ಅಭಿಪ್ರಾಯಪಟ್ಟರು.
ಭಾರತೀಯ ವೈದ್ಯಕೀಯ ಸಂಘ, ಕನ್ನಡ ವೈದ್ಯ ಬರಹಗಾರರ ಸಮಿತಿ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ಮಹಿಳೆಯರು ಇಂದು ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಒಳ್ಳೆಯ ಸ್ಥಾನ ಮಾನಗಳನ್ನು ಪಡೆದಿದ್ದಾರೆ. ಆದರೆ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಎಂದರು.
ಕನ್ನಡ ಬರಹಗಾರರ ಸಮಿತಿ ಅಧ್ಯಕ್ಷೆ ಡಾ. ವೀಣಾ ಎನ್. ಸುಳ್ಯ ಮಾತನಾಡಿ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಬೆಳವಣಿಗೆಯನ್ನು ಸಾಧಿಸುವತ್ತ ಮುನ್ನಡೆದಿದ್ದೇವೆ. ಈ ಹಂತದಲ್ಲೂ ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ಹೆಣ್ಣು ಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿ ಏನೆಂಬುದನ್ನು ಅರಿತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಹೆಣ್ಣಿನ ಮೇಲೆ ಮಾನಸಿಕ, ದೈಹಿಕ ಹಾಗೂ ಆರ್ಥಿಕ ಶೋಷಣೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಹೆಣ್ಣು ಮಗು ಹುಟ್ಟಿದಾಗ ಅಯ್ಯೋ ಯಾಕೆ ಹುಟ್ಟಿತು ಎನ್ನುವ ಜನರ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ಈ ಸಮಾಜದಲ್ಲಿ ಹೆಣ್ಣು ಮತ್ತು ಗಂಡು ನಡುವಿನ ಅಸಮಾನತೆ ಇನ್ನೂ ಇದೆ ಎಂದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಡಾ. ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಐಎಂಎ ಶಿವಮೊಗ್ಗ ಘಟಕದ ಉಪಾಧ್ಯಕ್ಷ ಡಾ. ಶಂಭುಲಿಂಗ ಬಂಕೊಳ್ಳಿ, ಪ್ರಮುಖರಾದ ಡಾ. ವಿನಯಾ ಶ್ರೀನಿವಾಸ್, ಡಾ. ಕೆ.ಎಸ್.ಪವಿತ್ರಾ, ಡಾ. ಕೆ.ಸುಬ್ರಹ್ಮಣ್ಯ, ಡಾ. ಕೆ.ಎಸ್.ಶುಭ್ರತಾ ಉಪಸ್ಥಿತರಿದ್ದರು.