ಬೆಂಗಳೂರು: ವ್ಯವಸ್ಥಿತವಾಗಿ ಖರೀದಿ ಕ್ಲೇಮ್‌ಗಳನ್ನು ಸೃಜಿಸಿ, ಇನ್‌ಪುಟ್ ಸಬ್ಸಿಡಿ ನಗದೀಕರಿಸಿಕೊಂಡ ವ್ಯಕ್ತಿಗಳು ನಂತರ ನಾಪತ್ತೆಯಾಗಿ ಬಿಡುತ್ತಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿನ ಈ ದೋಷ ಪತ್ತೆ ಹಚ್ಚಿದ್ದು, ಮಾರಾಟವನ್ನು ಖಚಿತಪಡಿಸಿಕೊಳ್ಳುವ ಮೂಲಕ ಹಗರಣ ನಿಯಂತ್ರಿಸಲು ಮುಂದಾಗಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ವಿಧಾನಸಭೆಯಲ್ಲಿ 2025ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ (ತಿದ್ದುಪಡಿ) ವಿಧೇಯಕ ಗುರುವಾರ ಒಪ್ಪಿಗೆ ಪಡೆಯಿತು. ಇದಕ್ಕೂ ಮುನ್ನ ಸಿಎಂ ಪರವಾಗಿ ವಿಧೇಯಕ ಪರ್ಯಾಲೋಚನೆಗೆ ಸೂಚಿಸಿದ ಅವರು, ಇದರ ಮೇಲೆ ಚರ್ಚೆಗೂ ಕೃಷ್ಣಬೈರೇಗೌಡ ಉತ್ತರಿಸಿದರು.
ಮಾರುಕಟ್ಟೆಯಲ್ಲಿ ದೊಡ್ಡಪ್ರಮಾಣದ ಪಾನ್‌ಮಸಾಲಾ, ಗುಟ್ಕಾ ವಹಿವಾಟು ನಡೆಯುತ್ತಿದೆ. ಆದರೆ ಜಿಎಸ್‌ಟಿ ಪಾವತಿ ಅತ್ಯಲ್ಪವಾಗಿದ್ದು, ತೆರಿಗೆ ಸೋರಿಕೆ ದೃಢಪಡುತ್ತಿದೆ. ನೂರಾರು ಲೋಡ್ ಅಡಿಕೆ ಬೇರೆ ರಾಜ್ಯಗಳಲ್ಲಿನ ಕಂಪನಿಗಳಿಗೆ ಸಾಗಣೆಯಾಗುತ್ತದೆ.
ಸರ್ಕಾರಕ್ಕೆ ಬರುವ ತೆರಿಗೆ ಕಡಿಮೆಯಾಗಿದೆ. ಸೋರಿಕೆ ತಡೆಗೆ ಪ್ರಾಯೋಗಿಕವಾಗಿ ಜಾಡು, ಪತ್ತೆ (ಟ್ರ್ಯಾಕ್ ಅಂಡ್ ಟ್ರೇಸ್) ಅಳವಡಿಸಲಾಗುತ್ತಿದೆ. ಇದಕ್ಕಾಗಿ ಜಿಎಸ್‌ಟಿ ಕಾಯ್ದೆಯಲ್ಲಿ ತಿದ್ದುಪಡಿ ಪ್ರಸ್ತಾಪಿಸಲಾಗಿದೆ ಎಂದರು.
ದೇಶವ್ಯಾಪಿ ಏಕರೂಪ ತೆರಿಗೆ ವ್ಯವಸ್ಥೆ ಇರಬೇಕೆಂಬ ಉದ್ದೇಶದಿಂದ ಈ ತಿದ್ದುಪಡಿ ಮಾಡಲಾಗಿದ್ದು, ಮುಂದಿನ ವಾರ ಜಿಎಸ್‌ಟಿ ಮಂಡಳಿ ಸಭೆ ನಿಗದಿಯಾಗಿದೆ. ಬಿಲ್ ಇಲ್ಲದ ವಹಿವಾಟಿಗೆ ಕಡಿವಾಣದ ಪ್ರಯತ್ನವಿದು, ಇಲಾಖೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿರುವುದು ನಿಜವೆಂದು ಸಚಿವ ಕೃಷ್ಣಬೈರೇಗೌಡ ಒಪ್ಪಿಕೊಂಡರು.
ಇದಕ್ಕೂ ಮುನ್ನ ಬಿಜೆಪಿಯ ಆರಗ ಜ್ಞಾನೇಂದ್ರ ಮಾತನಾಡಿ ಬಿಲ್‌ನೊಂದಿಗೆ ಸಾಗಿಸಿದ ಅಡಿಕೆಯನ್ನು ಗುಟ್ಕಾ ಕಂಪನಿಗಳು ಖರೀದಿಸುವುದಿಲ್ಲ. ಈ ವಹಿವಾಟು ಕಟ್ ಬಿಲ್ ಮೇಲೆ ನಡೆಯುತ್ತಿದ್ದು, 50 ಸಾವಿರ ರೂ.ವರೆಗೆ ಗುತ್ತಿಗೆ ವ್ಯವಹಾರವಾಗುತ್ತದೆ ಎಂದು ಹೇಳಿದರು.
ಕ್ವಿಂಟಾಲ್ ಅಡಿಕೆಗೆ ಮೂರು ಸಾವಿರ ತೆರಿಗೆ ವಸೂಲಿ ಮಾಡುತ್ತಾರೆ. ಕಟ್ ಬಿಲ್ ಮೇಲೆ ನೂರಾರು ಲೋಡ್ ಅಡಿಕೆ ವಹಿವಾಟು ನಡೆಯುತ್ತಿದ್ದು, ಸರ್ಕಾರಕ್ಕೆ ತೆರಿಗೆ ಬರುವುದಿಲ್ಲ. ಬೆಳೆಗಾರನಿಗೂ ಲಾಭ ಸಿಗುವುದಿಲ್ಲ, ಮಧ್ಯದಲ್ಲಿ ಸಹಕಾರ ಸಂಘಗಳು ಸತ್ತು ಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.