ನ್ಯೂಸ್

ಸಂಪಾದಕೀಯ | ರ‍್ಯಾಗಿಂಗ್ ಪಿಡುಗು ತಡೆಗಟ್ಟಿ

ಮೋಹನ್​ ಶೆಟ್ಟಿ

ರ‍್ಯಾಗಿಂಗ್ ಪಿಡುಗು ಇಡೀ ಶೈಕ್ಷಣಿಕ ವ್ಯವಸ್ಥೆಗೆ ದೊಡ್ಡ ಕಳಂಕ. ಅಮಾಯಕ ವಿದ್ಯಾರ್ಥಿಗಳಿಗೆ ದೊಡ್ಡ ಶಾಪವಾಗಿ ಕಾಡುತ್ತಿರುವ ರ್ಯಾಗಿಂಗ್​ಗೆ ಕಡಿವಾಣ ಹಾಕುವ ಮಾತುಗಳು ಅನುಷ್ಠಾನಕ್ಕೆ ಬಂದಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ದೇಶದ ವಿವಿಧೆಡೆ ಇಂಥ ಪ್ರಕರಣಗಳು ಪದೇಪದೆ ವರದಿಯಾಗುತ್ತಿವೆ. ಮಾತ್ರವಲ್ಲ, ರ್ಯಾಗಿಂಗ್​ಗೆ ಒಳಗಾದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ, ಆತ್ಮಹತ್ಯೆಗೆ ಯತ್ನಿಸಿದ ಘಟನೆಗಳು ಹೆಚ್ಚುತ್ತಲೇ ಇವೆ. ಶೈಕ್ಷಣಿಕ ಸಂಸ್ಥೆಗಳಿಗೆ ಗಾಂಜಾ ಸೇರಿ ಮಾದಕ ವಸ್ತುಗಳ ಪೂರೈಕೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಇದನ್ನು ಸೇವಿಸುವ ವಿದ್ಯಾರ್ಥಿಗಳು ಉನ್ಮಾದದಲ್ಲಿ ತಮ್ಮ ಕಿರಿಯ ವಿದ್ಯಾರ್ಥಿಗಳ ಅಥವಾ ಸಹಪಾಠಿಗಳ ಮೇಲೆ ಹಿಂಸಾತ್ಮಕ ರ್ಯಾಗಿಂಗ್ ನಡೆಸುವ ಘಟನೆಗಳು ಭಾರಿ ಆತಂಕ ಮತ್ತು ಕಳವಳ ಹುಟ್ಟಿಸಿವೆ. ದಿನಗಳೆದಂತೆ ರ್ಯಾಗಿಂಗ್ ಸ್ವರೂಪವೂ ಬದಲಾಗುತ್ತಿದ್ದು, ಈ ಪೈಶಾಚಿಕ ಕೃತ್ಯಗಳು ನಾಗರಿಕ ಸಮಾಜಕ್ಕೆ ನಾಚಿಕೆಗೇಡು.

ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ರ್ಯಾಗಿಂಗ್​ಗೆ ಹೆದರಿ, ಸೆಲ್ಪಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ಕಳೆದ ತಿಂಗಳಷ್ಟೇ (ಜುಲೈ) ಬೆಂಗಳೂರು ಉತ್ತರ ತಾಲೂಕಿನಲ್ಲಿ ವರದಿಯಾಗಿತ್ತು. ಆತನ ಬಡ ಪಾಲಕರ ಸ್ಥಿತಿ ಏನಾಗಿರಬೇಡ? ಯಾರದ್ದೋ ಕುಚೋದ್ಯ, ರಕ್ಕಸತನ ಅಮಾಯಕ ವಿದ್ಯಾರ್ಥಿಗಳ ಬಾಳಿಗೆ ಕಂಟಕವಾಗುತ್ತಿದ್ದು, ನಾಗರಿಕ ಸಮಾಜ ಇದನ್ನು ದೊಡ್ಡ ದನಿಯಲ್ಲಿ ಪ್ರತಿಭಟಿಸಬೇಕಿದೆ. 25 ವರ್ಷದ ಪಿಎಚ್​ಡಿ ವಿದ್ಯಾರ್ಥಿ ಅನಮಿತ್ರ ರಾಯ್ ರ್ಯಾಗಿಂಗ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಘಟನೆ ಎರಡು ದಿನಗಳ ಹಿಂದೆಯಷ್ಟೇ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ದಾಚೆಪಲ್ಲಿ ಸರ್ಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ಮೇಲೆ ಹಿರಿಯ ವಿದ್ಯಾರ್ಥಿಗಳು ಹಲ್ಲೆ ನಡೆಸಿ, ವಿದ್ಯುತ್ ಶಾಕ್ ನೀಡಿ ರ್ಯಾಗಿಂಗ್ ಮಾಡಿರುವ ಆಘಾತಕಾರಿ ಘಟನೆ ಬೆಚ್ಚಿಬೀಳಿಸಿದೆ.

11ನೇ ತರಗತಿಯ ಈ ವಿದ್ಯಾರ್ಥಿ ತನ್ನನ್ನು ಬಿಟ್ಟುಬಿಡುವಂತೆ ಅಂಗಲಾಚುತ್ತಿದ್ದರೂ, 12ನೇ ತರಗತಿಯ ಐವರು ವಿದ್ಯಾರ್ಥಿಗಳು ಆತನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿದ್ದಾರೆ. ಈ ಹಿಂದೆಯೂ ಇದೇ ಕಾಲೇಜಿನಲ್ಲಿ ಅಂಗವಿಕಲ ವಿದ್ಯಾರ್ಥಿಯೊಬ್ಬನ ಮೇಲೆ ರ್ಯಾಗಿಂಗ್ ನಡೆದಿತ್ತು. ಈ ಪಿಡುಗಿಗೆ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಎಂಬ ವ್ಯತ್ಯಾಸವೇ ಇಲ್ಲ. ಎಲ್ಲ ಕಡೆ ಈ ಸಮಸ್ಯೆ ವ್ಯಾಪಿಸಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಜತೆಗೆ ಮಾನಸಿಕ ಸ್ವಾಸ್ಥ್ಯವನ್ನೂ ಕಿತ್ತುಕೊಳ್ಳುತ್ತಿದೆ. ಈ ಘಟನೆಯ ಆಘಾತದಿಂದ ಹೊರಬರದೆ ಎಷ್ಟೋ ವಿದ್ಯಾರ್ಥಿಗಳು ಖಿನ್ನತೆಯಿಂದ ಬಳಲುತ್ತಿದ್ದು, ಅವರ ಶೈಕ್ಷಣಿಕ ಚಟುವಟಿಕೆಗಳೇ ಸ್ತಬ್ಧಗೊಂಡಿವೆ. ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಮತ್ತು ಶಾಲೆ, ಕಾಲೇಜ್ ಆವರಣವನ್ನು ಸುರಕ್ಷಿತವಾಗಿಸಬೇಕಿದೆ.

ರ್ಯಾಗಿಂಗ್ ನಡೆಸುವ ದುರುಳರಿಗೆ ಕಠಿಣ ಶಿಕ್ಷೆ ನೀಡುವುದರ ಜತೆಗೆ, ಅಂಥವರನ್ನು ಶೈಕ್ಷಣಿಕ ಸಂಸ್ಥೆಯಿಂದಲೇ ವಜಾಗೊಳಿಸಬೇಕು. ಆಗಲೇ ಬೇರೆಯವರು ಇಂಥ ಕೃತ್ಯಕ್ಕೆ ಇಳಿಯುವ ಮುನ್ನ ನೂರು ಬಾರಿ ಯೋಚಿಸುವಂತಾಗುತ್ತದೆ. ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಬರೀ ಮಾರ್ಗಸೂಚಿ ಹೊರಡಿಸಲು ಸೀಮಿತವಾಗದೆ ರ್ಯಾಗಿಂಗ್ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸಂತ್ರಸ್ತ ವಿದ್ಯಾರ್ಥಿಗಳಿಗೆ ಸೂಕ್ತ ನೆರವು ನೀಡಿ, ಆತ್ಮಸ್ಥೈರ್ಯ ತುಂಬಬೇಕು. ರ್ಯಾಗಿಂಗ್ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವಂಥ ಜಾಗೃತಿ ಕಾರ್ಯಕ್ರಮಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಆಯೋಜಿಸಬೇಕು.