ನ್ಯೂಸ್

ಲವ್‌ಜಿಹಾದ್ ತಡೆಗೆ ವಿಶೇಷ ಪೊಲೀಸ್ ಕಾರ‌್ಯಪಡೆ ಅಗತ್ಯವಿಲ್ಲ

ಚಿತ್ರದುರ್ಗ: ಲವ್‌ಜಿಹಾದ್ ತಡೆಗೆ ಪೊಲೀಸರ ವಿಶೇಷ ಕಾರ‌್ಯಪಡೆ ರಚನೆ ಅಗತ್ಯವಿಲ್ಲವೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ,ಲವ್‌ಜಿಹಾದ್‌ಗೆ ಕಡಿವಾಣ ಹಾಕುವಂತೆ ಹಿಂದೂ ಸಂಘಟನೆ ಮುಖಂಡರು ಮನವಿ ಮಾಡಿದ್ದಾರೆ. ಮತಾಂತರ ನಿಷೇಧ ಕಾಯ್ದೆಯಡಿಯಲ್ಲೇ ಲವ್‌ಜಿಹಾದ್ ನಿಯಂತ್ರಿಸಲು ಅವಕಾಶವಿದೆ.

ಆದರೆ ನೊಂದವರು ಕೂಡ ದೂರು ಸಲ್ಲಿಸ ಬೇಕು. ಪೊಲೀಸರು ಲವ್ ಜಿಹಾದ್ ವಿರುದ್ಧ ಪ್ರಕರಣ ದಾಖಲಿಸಿ,ತನಿಖೆ ನಡೆಸಬೇಕು. ಬೆಂಗಳೂ ರಲ್ಲಿ ಒಂದು ಪ್ರಕರಣ ದಾಖಲಾಗಿದೆ. ಲವ್ ಜಿಹಾದ್ ನಿಯಂತ್ರಣಕ್ಕೆಂದೇ ಪ್ರತ್ಯೇಕ,ಕಾಯ್ದೆ ಹಾಗೂ ಸ್ಪೆಷಲ್ ಟಾಸ್ಕ್ ಫೋರ್ಸ್ ಅಗತ್ಯವಿಲ್ಲ.

ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಸೇರಲು ನಮ್ಮ ಸಂವಿಧಾನದಲ್ಲಿ ಅವಕಾಶ ಇದೆ. ಮತಾಂ ತರಕ್ಕೂ ಮೊದಲು ಜಿಲ್ಲಾಧಿಕಾರಿಗೆ ಒಂದು ತಿಂಗಳ ಮೊದಲೇ,ಮತಾಂತರ ಮಾಡುವವರು,ಮತಾಂತರ ಆಗುವವರು ತಿಳಿಸಬೇಕು.

ಯಾವುದೇ ಆಮಿಷಕ್ಕೆ ಒಳಗಾಗದೇ ಮತಾಂತರ ಆಗುತ್ತಿದ್ದಾರೆ ಎಂದಾದರೆ ಜಿಲ್ಲಾಧಿಕಾರಿ ಪರಿಶೀಲಿಸಿ ಅನುಮತಿ ನೀಡುತ್ತಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತಾಂತರ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಸಚಿವರು,ಅನೇಕ ಸ್ವಾಮೀಜಿಗಳು ಕೂಡಾ ಈ ಕುರಿತು ಚರ್ಚಿಸಿದ್ದಾರೆ ಎಂದರು.

ಕಾಂಗ್ರೆಸ್ ನಾಯಕರ ಬಸ್ ಯಾತ್ರೆಗೆ ಪ್ರತಿಕ್ರಿಯಿಸಿದ ಜ್ಞಾನೇಂದ್ರ,ಬಸ್‌ಯಾತ್ರೆ ಅಥವಾ ತಿರುಪತಿ ಯಾತ್ರೆಯನ್ನಾದರೂ ಮಾಡಲಿ, ಜನ ರಾಜ್ಯ ದಲ್ಲಿ ಕಾಂಗ್ರೆಸ್‌ನ್ನು ಸೋಲಿಸಬೇಕೆಂದು ನಿರ್ಧರಿಸಿದ್ದಾರೆ.

ಯಾವ ಯಾತ್ರೆಗಳೂ ಕಾಂಗ್ರೆಸ್ಸಿಗೆ ಫಲ ನೀಡುವುದಿಲ್ಲವೆಂದು ಭವಿಷ್ಯ ನುಡಿದರು. ಸಂಪುಟ ವಿಸ್ತರಣೆಗೆಂದು ಹೋಗುತ್ತಿಲ್ಲ,ಗಡಿ ವಿಚಾರದಲ್ಲಿ ಕೇಂದ್ರ ಕರೆದಿರುವ ಸಭೆಯಲ್ಲಿ ಭಾಗವಹಿಸಲು ಹೊಸದಿಲ್ಲಿಗೆ ಹೋಗುತ್ತಿರುವುದಾಗಿ ತಿಳಿಸಿದರು.

----