ಡಾ.ವಸಿಂ 
ನ್ಯೂಸ್

ಮಾದಕ ವಸ್ತುಗಳ ಅಕ್ರಮ ಮಾರಾಟ ತಡೆಯಿರಿ

ಸಿಂಧನೂರು: ತಾಲೂಕು ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟ ತಡೆಗಟ್ಟಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕೆಂದು ಮಾದಕ ವ್ಯಸನ ನಿರ್ಮೂಲನಾ ಸಮಿತಿ ಸಂಚಾಲಕ ಡಾ.ವಸೀಂ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಇತ್ತೀಚೆಗೆ ಗಾಂಜಾ, ಡ್ರಗ್ಸ್ ಸೇರಿದಂತೆ ಅಮಲೇರಿಸುವ ಪದಾರ್ಥಗಳ ಮಾರಾಟ ಜಾಲ ಹಬ್ಬುತ್ತಿದ್ದು, ಯುವಕರು ದಾಸರಾಗಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ತಾಲೂಕಿನ ಗ್ರಾಮೀಣ ಪ್ರದೇಶದ ಕೆಲ ಕ್ಯಾಂಪ್‌ಗಳಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ನಗರದ ವಾರ್ಡ್‌ವೊಂದರಲ್ಲಿ ಮಾದಕ ವಸ್ತುಗಳ ಮಾರಾಟ ಜಾಲಗಳು ಇರುವ ಶಂಕೆ ಇದೆ.

ಅಂತಾರಾಜ್ಯದ ಪೆಡ್ಲರ್‌ಗಳೊಂದಿಗೆ ಲಿಂಕ್ ಹೊಂದಿರುವ ನಗರ ಹಾಗೂ ಗ್ರಾಮೀಣ ಪ್ರದೇಶದ ಕೆಲವರು, ಮಾದಕ ವಸ್ತುಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ದಿಟ್ಟ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಂಚಾಲಕರಾದ ಸಿರಾಜ್‌ಪಾಷಾ, ನಿಸಾರ್‌ಖಾನ್, ಜಾವೀದ್ ಖಾಜಿ, ಅಬಲೇಶ ನಾಯಕ, ಹನುಮಂತಪ್ಪ ಇದ್ದರು.