ನ್ಯೂಸ್

ಕುಂಭಮೇಳದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ ವ್ಯಕ್ತಿ ತಿಥಿ ದಿನದಂದು ಪ್ರತ್ಯಕ್ಷ; ಆತ ನೀಡಿದ ಕಾರಣ ಕೇಳಿ ಕುಟುಂಬಸ್ಥರು ಶಾಕ್

ಪ್ರಯಾಗ್​ರಾಜ್​: ಮೌನಿ ಅಮಾವಾಸ್ಯೆಯಂದು ಮಹಾಕುಂಭಮೇಳದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 30 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆದರೆ, ಕಾಲ್ತುಳಿತದಲ್ಲಿ ಸತ್ತಿದ್ದಾನೆ ಎಂದು ಘೋಷಿಸಲ್ಪಟ್ಟಿದ್ದ ವ್ಯಕ್ತಿಯೊಬ್ಬರು ತಮ್ಮ ತಿಥಿಯ ದಿನದಂದು ಪ್ರತ್ಯಕ್ಷವಾಗಿ ಕುಟುಂಬಸ್ಥರಿಗೆ ಆಶ್ಚರ್ಯವನ್ನುಂಟು ಮಾಡಿರುವ ಘಟನೆ ನಡೆದಿದೆ.

ಪ್ರಯಾಗ್​​ರಾಜ್​ನ ಖುಂತಿ ಗುರು ಎಂಬುವವರು ಮೌನಿ ಅಮಾವಾಸ್ಯೆಯಂದು ಪುಣ್ಯಸ್ನಾನ ಮಾಡಲು ಹೋಗುತ್ತೀನಿ ಎಂದು ಹೊರಟವರು ವಾಪಸ್ ಆಗಿರಲಿಲ್ಲ. ಘಟನೆ ನಡೆದು ವಾರಕ್ಕೂ ಹೆಚ್ಚು ದಿನ ಬಾರದಿರುವುದನ್ನು ಗಮನಿಸಿದ ಕುಟುಂಬಸ್ಥರು ಹಾಗೂ ಸ್ಥಳೀಯರು ತಿಥಿ ಕಾರ್ಯವನ್ನು ಮಾಡಿದ್ದಾರೆ. ಆದರೆ, ತಾವು ಸತ್ತಿದ್ದಾರೆ ಎಂದು ಭಾವಿಸಿದ ವ್ಯಕ್ತಿಯು ತಿಥಿಯ ದಿನದಂದು ಪ್ರತ್ಯಕ್ಷವಾಗಿದ್ದು, ಬಳಿಕ ಆತ ನೀಡಿದ ಕಾರಣ ಕೇಳಿ ಎಲ್ಲರೂ ಶಾಕ್​ ಆಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸ್ಥಳೀಯ ನಿವಾಸಿ ಅಭಯ್​ ಅವಸ್ಥಿ, ಖುಂತಿ ಗುರು ಅವರ ತಂದೆ ಖ್ಯಾತ ವಕೀಲರಾಗಿದ್ದು, ಪ್ರಯಾಗ್​ರಾಜ್​ನ ಜೀರೋ ಲೈನ್​ನಲ್ಲಿ ಸ್ವಂತ ಮನೆಯನ್ನು ಹೊಂದಿದ್ದಾರೆ. ಮೌನಿ ಅಮಾವಾಸ್ಯೆಯಂದು ಪುಣ್ಯಸ್ನಾನ ಮಾಡಿ ಬರುವುದಾಗಿ ಹೇಳಿ ಹೋಗಿದ್ದರು. ಆದರೆ, ವಾಪಸ್ ಬರಲೇ ಇಲ್ಲ. ಎಷ್ಟು ಹುಡುಕಾಡಿದರು ಅವರ ಸುಳಿವು ನಮಗೆ ಸಿಗಲಿಲ್ಲ. ಹೀಗಾಗಿ ಅವರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ ಎಂದು ಭಾವಿಸಿ ಕುಟುಂಬಸ್ಥರು ತಿಥಿ ಕಾರ್ಯವನ್ನು ನೆರವೇರಿಸಿದರು.

ತಿಥಿಯ ದಿನದಂದು ಖುಂತಿ ಗುರು ಮಮನೆಗೆ ವಾಪಸ್ ಬಂದಿದ್ದು, ಇಷ್ಟು ದಿನ ಎಲ್ಲಿಗೆ ಹೋಗಿದ್ದೆ ಎಂದು ಕೇಳಿದಾಗ ಆತ ನಾಗಾಸಾಧುಗಳೊಂದಿಗೆ ತಿರುಗಾಡುತ್ತಿದ್ದಾಗಿ ಹೇಳಿಕೊಂಡಿದ್ದು, ಕಳೆದ 15 ದಿನಗಳಿಂದ ಅವರೊಂದಿಗೆ ಸಮಯ ಕಳೆದಿದ್ದಾಗಿ ಹೇಳಿದರು. ಹೀಗಾಗಿ ನಾವು ಹೆಚ್ಚಾಗಿ ಏನು ಮಾತನಾಡಲಿಕ್ಕೆ ಹೋಗಲಿಲ್ಲ ಎಂದು ಅಭಯ್​ ಅವಸ್ಥಿ ಹೇಳಿದರು.