ಬೆಂಗಳೂರು: ರಾಷ್ಟ್ರಧ್ವಜಕ್ಕೆ ಬೇಕಾಗುವ ಬಟ್ಟೆ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ಧಾರವಾಡ ಜಿಲ್ಲೆಯ ಗರಗ ಕ್ಷೇತ್ರೀಯ ಸೇವಾ ಸಂಘವು 2023ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಭಾಜನವಾಗಿದೆ. ವಿಶ್ರಾಂತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯ ತೀರ್ಮಾನವನ್ನು ಅಂಗೀಕರಿಸಿ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಆದೇಶ ಹೊರಡಿಸಿದೆ.
ಅಕ್ಟೋಬರ್ 2 ರಂದು ಸಂಜೆ 4.30 ಕ್ಕೆ ನಗರದ ಭಗವಾನ್ ಮಹಾವೀರ(ಇನ್‌ಫೆಂಟ್ರಿ) ರಸ್ತೆಯ ವಾರ್ತಾ ಸೌಧದ ಸುಲೋಚನ ಸಭಾಂಗಣದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ ಐದು ಲಕ್ಷ ರೂಪಾಯಿ ನಗದು ಒಳಗೊಂಡ ರಾಜ್ಯ ಸರ್ಕಾರದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿರುವರು, ಶಾಸಕ ರಿಜ್ವಾನ್ ಅರ್ಷದ್ ಸಮಾರಂಭದ ಅಧ್ಯಕ್ಷತೆ ವಹಿಸುವರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಯವರೂ ಆಗಿರುವ ಮುಖ್ಯಮಂತ್ರಿಯವರ ಕಾರ್ಯದರ್ಶಿ ಎನ್.ಜಯರಾಮ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಧಾರವಾಡದಿಂದ 17 ಕಿ.ಮಿ.ದೂರದ ಗರಗ ಗ್ರಾಮಮದಲ್ಲಿರುವ ಗರಗ ಕ್ಷೇತ್ರೀಯ ಸೇವಾ ಸಂಘ ಹಲವು ದಶಕಗಳಿಂದ ಖಾದಿ ಉತ್ಪನ್ನ ಮತ್ತು ಖಾದಿ ಮಾರಾಟ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಇತ್ತೀಚೆಗೆ ಸಂಪೂರ್ಣ ರಾಷ್ಟ್ರಧ್ವಜ ತಯಾರಿಸುವ ಪರವಾನಿಗೆಯನ್ನು ಕೂಡ ಪಡೆದಿದೆ.
ಇದುವರೆಗೆ ಖಾದಿ ಗ್ರಾಮೋದ್ಯೋಗ ಆಯೋಗದ ಪ್ರಮಾಣಿತ ಗರಗ ಕೇಂದ್ರದಲ್ಲಿ ತಿರಂಗಾಕ್ಕೆ ಬಟ್ಟೆ ತಯಾರು ಮಾಡಿ ಬಣ್ಣಕ್ಕಾಗಿ ಮುಂಬೈಯ ಖಾದಿ ಡೈಯರ್ ಆಂಡ್ ಪ್ರಿಂಟರ್‌ಗೆ ಕಳುಹಿಸಿ, ಅಲ್ಲಿಂದ ವರ್ಣಮಯಗೊಂಡು ಸಿದ್ಧವಾಗುತ್ತಿದ್ದ ರಾಷ್ಟ್ರಧ್ವಜಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು. 2023 ರ ಜೂನ್ 3 ರಂದು ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) 2:3 ಅಡಿ ತ್ರಿವರ್ಣ ಧ್ವಜ ತಯಾರಿಕೆಗೆ ಅನುಮತಿ ನೀಡಿದೆ. ಇದರಿಂದಾಗಿ ಗರಗ ಕೇಂದ್ರದಲ್ಲಿಯೇ ನೂಲುವುದು, ನೇಯುವುದು, ಬಟ್ಟೆ ತಯಾರಿಕೆ ಜೊತೆಗೆ ಬಣ್ಣಗಳ ಮುದ್ರಣ ಮಾಡುವ ಕಾರ್ಯದೊಂದಿಗೆ ಸಂಪೂರ್ಣ ತಿರಂಗಾ ಧ್ವಜ ಇಲ್ಲಿಯೇ ರೂಪುಗೊಳ್ಳಲಿದೆ.
ಪ್ರಸ್ತುತ 10 ಹಳ್ಳಿಗಳಲ್ಲಿ ಈ ಘಟಕದ ನೂಲುವ ಕೇಂದ್ರಗಳಿದ್ದು, ನೇಯುವ ಕೇಂದ್ರಗಳಿರುವುದು ಗರಗ ಮತ್ತು ತಡಕೋಡದಲ್ಲಿ ಮಾತ್ರ. ಗರಗದಲ್ಲಿ 70 ಮಗ್ಗದ ಜೊತೆ 75 ಚರಕಗಳಿದ್ದರೆ ತಡಕೋಡದಲ್ಲಿ 30 ಮಗ್ಗಗಳ ಜೊತೆ 60 ಚರಕಗಳಿವೆ.