ಹುಣಸೂರು: ಹುಣಸೂರಿನ ಅಭಿವೃದ್ಧಿಗೆ ದೊರಕಬೇಕಿದ್ದ ಅನುದಾನವನ್ನು ನೀಡಬೇಡಿ ಎಂದು ಕೆಲ ವ್ಯಕ್ತಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ನ್ಯಾಯಯುತವಾಗಿ ಸಿಗಬೇಕಾದ ಅನುದಾನ ಸಿಗದಿದ್ದರೆ ತಾಲೂಕಿನ ಜನರೊಂದಿಗೆ ವಿಧಾನಸೌಧದ ಮುಂದೆ ಧರಣಿ ಕುಳಿತುಕೊಳ್ಳಲು ಸಿದ್ಧರಿದ್ದೇವೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಹೇಳಿದರು.
ಹುಣಸೂರು ನಗರದ ಕನಕ ಭವನದಲ್ಲಿ ಶುಕ್ರವಾರ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ವತಿಯಿಂದ ನೂತನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ರಿಗೆ ಅಭಿನಂದನೆ ಮತ್ತು ಮತದಾರರಿಗೆ ಕೃತಜ್ಞತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆಂದು ಅಭಿವೃದ್ಧಿ ಯೋಜನೆಗಳಿಗೆ ಅನುದಾನವನ್ನೇ ನೀಡುತ್ತಿಲ್ಲ. ಸಹಜವಾಗಿ ಸಿಗಬೇಕಿದ್ದ ಅನುದಾನಕ್ಕೂ ಕತ್ತರಿ ಬಿದ್ದಿದೆ. ಕಳೆದ ಎರಡು ದಿನಗಳಲ್ಲಿ ನಾನು ಸರ್ಕಾರದ ನಗರಾಭಿವೃದ್ಧಿ ಮತ್ತು ಪೌರಾಡಳಿತ ಸಚಿವ, ಅರಣ್ಯ, ಸಮಾಜಕಲ್ಯಾಣ ಮುಂತಾದ ಇಲಾಖೆ ಸಚಿವರನ್ನು ಭೇಟಿ ಮಾಡಿ ಅಭಿವೃದ್ಧಿಗಾಗಿ ಅನುದಾನ ನೀಡಬೇಕೆಂದು ಕೋರಿದ್ದೇ ಎಂದರು.
ಹುಣಸೂರು ಕ್ಷೇತ್ರಕ್ಕೆ ಅನುದಾನ ನೀಡಬೇಡಿ ಎಂದು ಕೆಲವ್ಯಕ್ತಿಗಳು ಸಚಿವರು ಮತ್ತು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆಂದು ಸಚಿವರುಗಳ ಬಾಯಿಂದಲೇ ಬಂದಿದೆ. ತಾಲೂಕಿನ ಜನರು ಎತ್ತರಕ್ಕೆ ಬೆಳೆಸಿದ ವ್ಯಕ್ತಿಯೇ ಅಭಿವೃದ್ಧಿಗೆ ಅಡ್ಡಿಯುಂಟು ಮಾಡುವುದು ಸರಿಯಲ್ಲ ಎಂದರು.
ಸಿಡಿಸಿ ಸಮಿತಿ, ಅಕ್ರಮ ಸಕ್ರಮ ಸಮಿತಿ ರಚನೆ ಏಕಿಲ್ಲ?: ನೂತನವಾಗಿ ರಚಿಸಿರುವ ಕಾಲೇಜು ಅಭಿವೃದ್ಧಿ ಸಮಿತಿಗೆ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕೃತ ಮುದ್ರೆ ಒತ್ತುತ್ತಿಲ್ಲ. ಒಂದು ವರ್ಷದಿಂದ ನಾಲ್ಕೈದು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಾಲೇಜು ಅಭಿವೃದ್ಧಿ ಸಮಿತಿ ರಚನೆ ವಿಚಾರದಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಹುಣಸೂರು ಉಪವಿಭಾಗ ವ್ಯಾಪ್ತಿಯ ಎಲ್ಲ ತಾಲೂಕುಗಳಲ್ಲೂ ಅಕ್ರಮ ಸಕ್ರಮ ಸಮಿತಿ ರಚನೆಯಾಗಿ ರೈತರಿಗೆ ಸಾಗುವಳಿ ಪತ್ರ ನೀಡಲಾಗುತ್ತಿದೆ. ಆದರೆ ಹುಣಸೂರು ತಾಲೂಕಿಗೆ ಮಾತ್ರ ಆಗಿಲ್ಲ. ಇದಕ್ಕೆ ಕಾರಣವೇನು? ಸಮಿತಿ ರಚಿಸದಂತೆ ತಡೆಯೊಡ್ಡುತ್ತಿರುವವರ‌್ಯಾರು? ಅಭಿವೃದ್ಧಿ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಸರ್ಕಾರದ ಮಟ್ಟದಲ್ಲಿ ಅನುದಾನ ತನ್ನಿರಿ. ಯೋಜನೆಯ ಕ್ರೆಡಿಟ್ ನೀವೇ ತೆಗೆದುಕೊಳ್ಳಿ. ಆದರೆ, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬೇಡಬಾರದು ಎಂದರು.
ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿ: ನೂತನ ಸಂಸದರು ತಾಲೂಕಿನ ಅಭಿವೃದ್ಧಿಗಾಗಿ ತಮ್ಮೊಂದಿಗೆ ಕೈಜೋಡಿಸುವ ಭರವಸೆ ನೀಡಿದ್ದಾರೆ. ಕೇಂದ್ರದಲ್ಲಿ ಪ್ರಧಾನಮಂತ್ರಿ ಮೋದಿ ಜೀ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿಯವರ ಮೇಲೆ ನಂಬಿಕೆಯಿಟ್ಟು, ಕುಮಾರಸ್ವಾಮಿ ಅವರನ್ನು ಉಕ್ಕು ಮತ್ತು ಬೃಹತ್ ಕೈಗಾರಿಕೆ ಮಂತ್ರಿಯನ್ನಾಗಿ ಮಾಡಿದ್ದಾರೆ. ಇದು ರಾಜ್ಯಕ್ಕೆ ಮತ್ತು ನಮ್ಮ ತಾಲೂಕಿಗೂ ಆಶಾದಾಯಕ ಬೆಳವಣಿಗೆ. ಸಂಸದರೊಂದಿಗೆ ಕೂಡಿ ತಾಲೂಕಿನ ಜನರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ಹಿರಿಯ ಮುಖಂಡ ನಾಗರಾಜ ಮಲ್ಲಾಡಿ ಮಾತನಾಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಕಾಂತರಾಜು, ನಗರಮಂಡಲ ಅಧ್ಯಕ್ಷ ನಾರಾಯಣ್, ಜೆಡಿಎಸ್ ಅಧ್ಯಕ್ಷ ದೇವರಾಜ ಒಡೆಯರ್, ಮುಖಂಡ ಗಣೇಶ್ ಕುಮಾರಸ್ವಾಮಿ, ಸತೀಶ್‌ಕುಮಾರ್, ಸೂರ್ಯಕುಮಾರ್, ಜಿ.ಪಂ.ಮಾಜಿ ಸದಸ್ಯ ದೇವರಾಜ್ ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ಹರವೆ ಶ್ರೀಧರ್, ಚಿಕನ್ ಮಧು, ವೆಂಕಟಮ್ಮ, ಕಮಲಮ್ಮ, ಯಶೋಧಮ್ಮ, ಹಬ್ಬನಕುಪ್ಪೆ ದಿನೇಶ್, ಮಂಜುನಾಥ್ ಸೇರಿದಂತೆ ಎರಡೂ ಪಕ್ಷಗಳ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಹಾಜರಿದ್ದರು.
2004ರಿಂದ ಲೀಡ್ ಸಿಕ್ಕಿರಲಿಲ್ಲ;
ಮೈಸೂರು ಕೊಡಗು ಲೋಕಸಭಾ ಚುನಾವಣೆಯಲ್ಲಿ 2004ರಿಂದಲೂ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ದೊರಕುತ್ತಿತ್ತು. ಇದೇ ಮೊದಲ ಬಾರಿಗೆ ಹುಣಸೂರಿನಲ್ಲಿ ಎನ್‌ಡಿಎ ಅಭ್ಯರ್ಥಿರಿಗೆ 3048 ಮತಗಳ ಲೀಡ್ ನೀಡಿದ್ದಾರೆ. ಜೆಡಿಎಸ್ ಬಿಜೆಪಿ ಪಕ್ಷಗಳ ಮೈತ್ರಿಯ ಪರಿಣಾಮ ಇದಾಗಿದೆ. ಇದಕ್ಕಾಗಿ ಎರಡೂಪಕ್ಷಗಳ ಕಾರ್ಯಕರ್ತರನ್ನು ನಾನು ಅಭಿನಂದಿಸುತ್ತೇನೆಂದು ಶಾಸಕ ಜಿ.ಡಿ.ಹರೀಶ್‌ಗೌಡ ಸಂತಸ ವ್ಯಕ್ತಪಡಿಸಿದರು.
ಗ್ಯಾರಂಟಿಯನ್ನು ಜನತೆ ತಿರಸ್ಕರಿಸಿದ್ದಾರೆ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳ ಪೈಕಿ 143 ಕ್ಷೇತ್ರಗಳಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಇದರ ಅರ್ಥ ಜನತೆ ಒಂದೇ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿದ್ದಾರೆ. ಅಭಿವೃದ್ಧಿಗಾಗಿ ಎನ್‌ಡಿಎ ಮೈತ್ರಿ ಕೂಟಕೆ ಮತಹಾಕಿದ್ದಾರೆ. ಗ್ಯಾರಂಟಿಯ ಜತೆ ಅಭಿವೃದ್ಧಿಯನ್ನೂ ಸರ್ಕಾರ ನೀಡಬೇಕಿದೆ ಎಂದು ಹರೀಶ್‌ಗೌಡ ಸರ್ಕಾರಕ್ಕೆ ಸಲಹೆ ನೀಡಿದರು.