ನ್ಯೂಸ್

ಅಧಿಕಾರಿ ವರ್ಗದಿಂದ ನಿರ್ಲಕ್ಷ್ಯ - ಉಪ್ಪಿನಂಗಡಿ ಗ್ರಾಪಂ ಸದಸ್ಯ ಸುರೇಶ್ ಅತ್ರಮಜಲು ಆರೋಪ

Mangaluru - Nishantha Narayana

ಪುತ್ತೂರು: ಕೋಡಿಂಬಾಡಿ, ಬೆಳ್ಳಿಪ್ಪಾಡಿ, ೩೪ನೇ ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ, ಬಜತ್ತೂರು ಗ್ರಾಮದಲ್ಲಿ ಮೇ ೩೦ರಂದು ಸುರಿದ ಮಳೆಯಿಂದ ತೀವ್ರ ತರದ ಭೂಕುಸಿತ, ಮನೆ, ಕೃಷಿ, ರಸ್ತೆ ಹಾನಿಯಾಗಿದೆ. ಘಟನೆ ನಡೆದು ೫ ದಿನವಾದರೂ, ಗ್ರಾಮಕ್ಕೆ ತಹಸೀಲ್ದಾರ್, ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿ ಭೇಟಿ ನೀಡುವ ಕಾರ್ಯವಾಗಿಲ್ಲ ಎಂದು ಉಪ್ಪಿನಂಗಡಿ ಗ್ರಾಪಂ ಸದಸ್ಯ ಸುರೇಶ್ ಅತ್ರಮಜಲು ಹೇಳಿದರು.

ರಾತ್ರಿ ಮನೆಯೊಳಗೆ ಮಣ್ಣು ತುಂಬಿ ಅಪಾಯದ ಸ್ಥಿತಿಯಲ್ಲಿದ್ದರೂ ಅಧಿಕಾರಿಗಳು, ಎನ್‌ಡಿಆರ್‌ಎಫ್ ತಂಡದವರು ರಕ್ಷಣೆಗೆ ಬಂದಿಲ್ಲ. ದರೆ ಕುಸಿತದಿಂದ ಆಗಿರುವ ಸಮಸ್ಯೆ ಸರಿಪಡಿಸುವ ಕಾರ್ಯವೂ ನಡೆಯುತ್ತಿಲ್ಲ. ಪಂಚಾಯಿತಿಗಳಿಗೆ ೩೫ ಸಾವಿರ ರೂ. ನೀಡಿದರೆ, ಅದರಿಂದ ಒಂದು ಭಾಗದ ತೆರವು ಕಾರ್ಯವೂ ಸಾಧ್ಯವಿಲ್ಲ. ಅಧಿಕಾರಿ ವರ್ಗದಿಂದ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಮನೆ ನಾಶವಾದ ಕುಟುಂಬಕ್ಕೆ ೧೦ ಲಕ್ಷ ರೂ., ಭಾಗಶಃ ಹಾನಿಯಾದ ಮನೆಗೆ ೨ ಲಕ್ಷ ರೂ. ಪರಿಹಾರ ನೀಡಬೇಕು. ಕೃಷಿ ಹಾನಿಯಾದವರಿಗೆ ಎಕರೆಗೆ ೨ ಲಕ್ಷ ಪರಿಹಾರ ನೀಡಬೇಕು. ರಸ್ತೆ, ತೋಡು ದುರಸ್ತಿಗೆ, ದರೆ ಕುಸಿತವನ್ನು ತೆರವು ಮಾಡುವುದಕ್ಕೆ ಪಂಚಾಯಿತಿಗಳಿಗೆ ಒಂದೊಂದು ಕೋಟಿ ಅನುದಾನ ತಕ್ಷಣ ನೀಡಬೇಕು ಎಂದು ಆಗ್ರಹಿಸಿದರು.

ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ್, ಬಜತ್ತೂರು ಗ್ರಾಮ ಪಂಚಾಯೀತಿ ಸದಸ್ಯ ಗಂಗಾಧರ ಪಿ.ಎನ್., ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್ ನೆಕ್ಕಿಲಾಡಿ, ಬೆಳ್ಳಿಪ್ಪಾಡಿ ಕೋಡಿಂಬಾಡಿ ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರ ಉಪಸ್ಥಿತರಿದ್ದರು.