ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ವಿರೋಧಿಸಿ ಸುದ್ದಿಗೋಷ್ಠಿ ನಡೆಯುತ್ತಿರುವ ವೇಳೆ ಹೃದಯಾಘಾತದಿಂದ ಕೋಲಾರದ ಕಾಂಗ್ರೆಸ್ ಮುಖಂಡರೊಬ್ಬರು ಸಾವನ್ನಪ್ಪಿರುವಂತಹ ಘಟನೆ ನಗರದ ಪ್ರೆಸ್ ಕ್ಲಬ್ನಲ್ಲಿ ನಡೆದಿದೆ.
ಸಿ.ಕೆ.ರವಿಚಂದ್ರನ್ ಹೃದಯಾಘಾತದಿಂದ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ. ರಾಜ್ಯಪಾಲರ ಪ್ರಾಸಿಕ್ಯೂಷನ್ ವಿರೋಧಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಸಂಘದಿಂದ ಸುದ್ದಿಗೋಷ್ಠಿ ನಡೆಯುತ್ತಿರುವಾಗ ಘಟನೆ ನಡೆದಿದೆ.
ಮೈಕ್ ಹಿಡಿದು ಮಾತನಾಡುತ್ತಿದ್ದ ರವಿಚಂದ್ರನ್ ಅವರು ಕುಳಿತ ಚಯರ್‌ನಿಂದಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಕನ್ನಿಂಗ್ ಹ್ಯಾಮ್ ರಸ್ತೆಯ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪೋರ್ಟಿಸ್ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಕೋಲಾರದ ಚಿಂತಾಮಣಿ ಮೂಲದ ಸಿ.ಕೆ ರವಿಚಂದ್ರನ್ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಜೊತೆ ಓಡನಾಟ ಹೊಂದಿದ್ದರು. ಬೆಂಗಳೂರು ನಗರದ ಆರ್.ಆರ್ .ನಗರದ ಚನ್ನಸಂದ್ರದಲ್ಲಿ ವಾಸವಾಗಿದ್ದ ಇವರು ಅಮ್ಮ ಕಾನ್ವೆಂಟ್ ಹೆಸರಿನ ಶಾಲೆ ನಡೆಸುತ್ತಿದ್ದರು. ಸಿಎಂ ಸಿದ್ದರಾಮಯ್ಯ ಜೊತೆ ಸಹ ಓಡನಾಟ ಹೊಂದಿದ್ದ ಇವರು ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರಾಗಿ ನೇಮಕವಾಗಿದ್ದರು.