ನವದೆಹಲಿ: ನಿರ್ಭಯಾ ಅತ್ಯಾಚಾರ ಅಪರಾಧಿಗಳಲ್ಲಿ ಓರ್ವನಾದ ಮುಕೇಶ್ ಸಿಂಗ್ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ತಿರಸ್ಕರಿಸಿದ್ದಾರೆ.
ಜ.22ರಂದು ಬೆಳಗ್ಗೆ 7ಗಂಟೆಗೆ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸುವಂತೆ ದೆಹಲಿ ಪಟಿಯಾಲಾ ಕೋರ್ಟ್ ಆದೇಶಿಸಿತ್ತು. ಆದರೆ ಮುಕೇಶ್ ಸಿಂಗ್ ದಯಾ ಅರ್ಜಿ ಸಲ್ಲಿಸಿದ್ದರು. ಇಂದು ಗೃಹ ಸಚಿವಾಲಯ ಅರ್ಜಿಯನ್ನು ರಾಷ್ಟ್ರಪತಿಗೆ ಕಳಿಸಿಕೊಟ್ಟಿತ್ತು. ರಾಷ್ಟ್ರಪತಿ ಭವನಕ್ಕೆ ಅಪರಾಧಿಯ ಕ್ಷಮಾದಾನ ಮನವಿ ಅರ್ಜಿ ಕಳಿಸಿಕೊಟ್ಟಿದ್ದ ಗೃಹಸಚಿವಾಲಯ, ಅರ್ಜಿ ತಿರಸ್ಕರಿಸುವಂತೆ ಶಿಫಾರಸು ಮಾಡಿತ್ತು ಎಂದು ಮೂಲಗಳು ತಿಳಿಸಿವೆ.
ಅಷ್ಟೇ ಅಲ್ಲದೆ ಅಪರಾಧಿಯ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ದೆಹಲಿ ಸರ್ಕಾರ ಕೂಡ ಶಿಫಾರಸು ಮಾಡಿತ್ತು. ಗೃಹಸಚಿವಾಲಯ ಮತ್ತು ದೆಹಲಿ ಸರ್ಕಾರದ ಮನವಿಯಂತೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಅಧಿಕೃತವಾಗಿ ದಯಾ ಅರ್ಜಿಯನ್ನು ತಿರಸ್ಕರಿಸಿದ್ದಾರೆ.(ಏಜೆನ್ಸೀಸ್)