ನ್ಯೂಸ್

ಸ್ವಗ್ರಾಮ ಪರೌಂಖ್​ಗೆ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್​ ಭೇಟಿ

ಕಾನ್ಪುರ : "ನನ್ನಂಥ ಸಾಮಾನ್ಯ ಹಳ್ಳಿ ಹುಡುಗ ದೇಶದ ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸುವ ಗೌರವ ಹೊಂದಬಹುದೆಂದು ನಾನೆಂದೂ ಯೋಚಿಸಿರಲಿಲ್ಲ. ಆದರೆ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಅದನ್ನು ಸಾಧ್ಯಗೊಳಿಸಿದೆ" ಎಂದು ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್​ ಹೇಳಿದ್ದಾರೆ. ಅವರು, ತಮ್ಮ ಹುಟ್ಟೂರಾದ ಉತ್ತರಪ್ರದೇಶದ ಕಾನ್ಪುರ ದೆಹಾತ್​ ಜಿಲ್ಲೆಯ ಪರೌಂಖ್ ಗ್ರಾಮದಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದರು.

"ನಾನು ಇಂದು ಎಲ್ಲಿಗೆ ತಲುಪಿದ್ದೇನೋ ಅದರ ಶ್ರೇಯಸ್ಸು ನನ್ನ ಈ ಹಳ್ಳಿಯ ಪ್ರಾಂತ್ಯದ ಮಣ್ಣಿಗೆ ಹಾಗೂ ನಿಮ್ಮ ಪ್ರೀತಿ-ಆಶೀರ್ವಾದಗಳಿಗೆ ಸಲ್ಲುತ್ತದೆ" ಎಂದ ರಾಷ್ಟ್ರಪತಿ ಕೋವಿಂದ್​ ಅವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನದ ರಚನಾಕಾರರನ್ನು ಸ್ಮರಿಸಿದರು. ತಮ್ಮ ಹಳ್ಳಿಯ ಪ್ರತೀತಿಗಳ ಬಗ್ಗೆ, ಕುಟುಂಬದ ಸಂಸ್ಕಾರದ ಬಗ್ಗೆ ಮಾತಾಡಿದ ಅವರು, ಪರೌಂಖ್​ ಕೇವಲ ತಮ್ಮ ಹಳ್ಳಿಯಲ್ಲ, 'ಮಾತೃಭೂಮಿ'ಯಾಗಿದೆ. ದೇಶಕ್ಕಾಗಿ ದುಡಿಯಲು ಪ್ರೇರಣೆಯಾಗಿದೆ ಎಂದರು.

ತಮ್ಮ ಹುಟ್ಟೂರಿಗೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿಗಳು ಇಂದು ಬೆಳಿಗ್ಗೆ ಪರೌಂಖ್​ ಗ್ರಾಮ ತಲುಪಿದರು. ಉ.ಪ್ರ. ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕೋವಿಂದ್ ಅವರನ್ನು ಸ್ವಾಗತಿಸಿದರು. ನಂತರ ಗ್ರಾಮದ ಸುತ್ತ ಓಡಾಡಿದ ಅವರು, ಪತ್ನಿ ಮತ್ತು ಪುತ್ರಿಯೊಂದಿಗೆ ಪಾತ್ರಿ ದೇವಿ ಮಂದಿರಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದರು ಎನ್ನಲಾಗಿದೆ. (ಏಜೆನ್ಸೀಸ್)