ಯೋಗ ಫೆಡರೇಷನ್ ಆಫ್ ಮೈಸೂರು (ವೈಎಫ್‌ಎಂ)ನಿಂದ ನಗರದಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರೊ.ಎನ್.ಕೆ.ಲೋಕನಾಥ್, ಶ್ರೀಹರಿದ್ವಾರಕಾನಾಥ್, ಡಾ.ಸಿ.ಜಿ.ಬೆಟಸೂರ ಮಠ, ಡಾ. ರೇಣುಕಾದೇವಿ, ಡಾ.ಯೋಗಿ ದೇವರಾಜ್ ಇತರರು ಇದ್ದರು. 
ನ್ಯೂಸ್

ಯೋಗದ ಜ್ಞಾನ ಪರಂಪರೆ ಸಂರಕ್ಷಿಸಿರಿ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಪರಂಪರೆಯೊಂದಿಗೆ ಯೋಗ ಬೆಸೆದುಕೊಂಡಿದೆ
  • ಯೋಗದ ಇತಿಹಾಸ ಹಾಗೂ ಅದರ ಹಿಂದಿರುವ ಭಾರತೀಯ ಜ್ಞಾನ ಪರಂಪರೆ ದಾಖಲಿಸಿ ಸಂರಕ್ಷಿಸಬೇಕು
ಮೈಸೂರು:ಯೋಗದೊಂದಿಗೆ ಭಾರತೀಯ ತತ್ವಶಾಸ್ತ್ರ, ಆಹಾರ ಪದ್ಧತಿ ಹಾಗೂ ಜೀವನಶೈಲಿ ಇಂದಿನ ಯುವ ಜನಾಂಗಕ್ಕೆ ತಿಳಿಸಿಕೊಡುವ ಅಗತ್ಯವಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ಹನ್ನೇರಡನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗ ಫೆಡರೇಷನ್ ಆಫ್ ಮೈಸೂರು (ವೈಎಫ್‌ಎಂ), ವಿವಿಧ ಸಂಘಟನೆಗಳಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಪರಂಪರೆಯೊಂದಿಗೆ ಯೋಗ ಬೆಸೆದುಕೊಂಡಿದೆ. ಹೀಗಾಗಿ ಯೋಗದ ಇತಿಹಾಸ ಹಾಗೂ ಅದರ ಹಿಂದಿರುವ ಭಾರತೀಯ ಜ್ಞಾನ ಪರಂಪರೆ ದಾಖಲಿಸಿ ಸಂರಕ್ಷಿಸಬೇಕು. ಅಲ್ಲದೆ ಭಾರತೀಯ ತತ್ವಶಾಸ್ತ್ರ, ಆಹಾರ ಪದ್ಧತಿ ಹಾಗೂ ಜೀವನಶೈಲಿ ತಿಳಿಸಿಕೊಡುವ ಕೆಲಸ ಆಗಬೇಕು ಎಂದರು.
ಯೋಗದ ಮೂಲಕ ಮೈಸೂರು ವಿಶ್ವದ ಗಮನ ಸೆಳೆಯುತ್ತಿರುವ ಬೆನ್ನಲ್ಲೇ ನಗರದ ಐತಿಹಾಸಿಕ ಯೋಗ ಪರಂಪರೆ ಬಲಪಡಿಸಿ ಮೈಸೂರನ್ನು ವಿಶ್ವದ ಪ್ರಮುಖ ಯೋಗ ಕೇಂದ್ರವನ್ನಾಗಿ ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಯೋಗ ದಿನಾಚರಣೆಯ ಸಂದರ್ಭದಲ್ಲಿ ಬೃಹತ್ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ದಾಖಲೆ ನಿರ್ಮಿಸುವುದು ಹೆಮ್ಮೆಯ ಸಂಗತಿ. ಆದರೆ ಯೋಗವನ್ನು ಕೇವಲ ಒಂದು ದಿನದ ಆಚರಣೆಗೆ ಮಾತ್ರ ಸೀಮಿತಗೊಳಿಸದೆ, ಜನರ ದೈನಂದಿನ ಜೀವನದ ಭಾಗವಾಗಿಸುವುದು ಹೆಚ್ಚು ಮುಖ್ಯ ಎಂದರು.
ಸಾಫ್ಟ್‌ಪವರ್ ಆಗಿ ಬಳಸೋಣ:
ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನದ ಮೂಲಕ ಯೋಗಕ್ಕೆ ಜಾಗತಿಕ ವೇದಿಕೆ ಕಲ್ಪಿಸಿದ್ದಾರೆ. ಯೋಗವನ್ನು ಭಾರತದ ಸಾಫ್ಟ್ೃ ಪವರ್ ಆಗಿ ಬಳಸಿಕೊಂಡು ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಜೀವನಶೈಲಿಯ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಬೇಕಿದೆ ಎಂದರು.
ಈ ನಿಟ್ಟಿನಲ್ಲಿ ಮೈಸೂರಿನ ಕೆಲವು ಪ್ರದೇಶಗಳನ್ನು ಯೋಗದ ಮಾದರಿ ಪ್ರದೇಶಗಳಾಗಿ ಅಭಿವೃದ್ಧಿಪಡಿಸಿ, ಯೋಗಾಭ್ಯಾಸಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ಜಿಎಸ್‌ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ ದ್ವಾರಕಾನಾಥ್ ಮಾತನಾಡಿದರು.
ಅಂತಾರಾಷ್ಟ್ರೀಯ ಯೋಗ ದಿನದ ಯಶಸ್ಸಿಗೆ ಸಹಕರಿಸಿದ ವಿವಿಧ ಸಂಘ-ಸಂಸ್ಥೆಗಳು, ಯೋಗ ಸಂಸ್ಥೆಗಳಿಗೆ ಪ್ರಮಾಣ ಪತ್ರ ನೀಡುವ ಮೂಲಕ ಅಭಿನಂದಿಸಲಾಯಿತು.
ಶಾಸಕ ಟಿ.ಎಸ್. ಶ್ರೀವತ್ಸ, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ, ಮೈಸೂರು ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾದೇವಿ, ಗ್ಲೋಬಲ್ ಯೋಗ ರೆಕಾರ್ಡ್ಸ್ ಕೌನ್ಸಿಲ್ ಅಧ್ಯಕ್ಷ ಡಾ.ಯೋಗಿ ದೇವರಾಜ್, ಪತ್ರಕರ್ತ ಕೆ.ದೀಪಕ್ ಇತರರು ಇದ್ದರು.