ಶ್ರೀರಂಗಪಟ್ಟಣ: ರಾಜಧಾನಿ ಬೆಂಗಳೂರು ನಿರ್ಮಾತೃ, ಕೆರೆ-ಕಟ್ಟೆಗಳ ಅಭಿವೃದ್ಧಿಯ ಹರಿಕಾರ ನಾಡಪ್ರಭು ಕೆಂಪೇಗೌಡರ ಕೊಡುಗೆಗಳನ್ನು ಉಳಿಸಿ ಅವರ ದೂರದೃಷ್ಟಿಯ ಚಿಂತನೆಗಳನ್ನು ಅಳವಡಿಸಿಕೊಂಡು ಜನಪರ ಕಾರ್ಯಗಳನ್ನು ನೀಡುವ ಹಾದಿಯಲ್ಲಿ ಜನಸೇವಕರು ನಡೆಯಬೇಕಿದೆ ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಒಕ್ಕಲಿಗರ ಸಂಘ ಹಾಗೂ ಪಕ್ಷಾತೀತ ಮುಖಂಡರ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಕ್ತಿ-ಭಾವದ ಪೂಜೆಯೊಂದಿಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಸರ್ವರ ಸಹಬಾಳ್ವೆಗೆ ಸಾಮಾಜಿಕ ಕ್ರಾಂತಿ ಸೃಷ್ಟಿಸಿ ಪ್ರಗತಿಪರ ಹಾಗೂ ಅಭಿವೃದ್ಧಿಯ ಚಿಂತನೆ ಮೂಲಕ ಉತ್ತಮ ಸಮಾಜ, ಕಟ್ಟಿಕೊಟ್ಟು ಸರ್ವರು ಸಂತಸದಿ ಬದುಕಲು ಅವಕಾಶ ಕಲ್ಪಿಸಿಕೊಟ್ಟ ಹೃದಯವಂತ ದೊರೆ ನಾಡಪ್ರಭು ಕೆಂಪೇಗೌಡರು. ಕೃಷಿ, ವಾಣಿಜ್ಯ ಸೇರಿದಂತೆ ಸರ್ವ ಧರ್ಮ, ವರ್ಗ, ಸಮುದಾಯಗಳನ್ನು ಗೌರವ ಸಮಾನತೆಯಿಂದ ಅಭಿವೃದ್ಧಿಗೊಳಿಸಿದ ಅವರ ನಡೆ ಸರ್ವಕಾಲಕ್ಕೂ ಆದರ್ಶನೀಯ. ಹೀಗಾಗಿ ಕ್ಷೇತ್ರದಲ್ಲಿ ಕೆರೆ-ಕಟ್ಟೆಗಳ ಅಭಿವೃದ್ಧಿ ಹಾಗೂ ಕೃಷಿ ಚಟುವಟಿಕೆಗೆ ನೀರಾವರಿ ಅನೂಕೂಲತೆ ಕಲ್ಪಿಸಲು ನಾಲೆಗಳ ಆಧುನೀಕರಣಗೊಳಿಸುವ ಮೂಲಕ ನಾಡಪ್ರಭು ಕೆಂಪೇಗೌಡರ ಚಿಂತನೆಗಳನ್ನು ಜೀವಂತವಾಗಿರಿಸಲು ಪ್ರಯತ್ನಿಸಲಾಗಿದೆ. ಶೀಘ್ರದಲ್ಲೇ ಪಟ್ಟಣದಲ್ಲಿ ಕೆಂಪೇಗೌಡರ ಅತ್ಯಾಕರ್ಷಕ ಪುತ್ಥಳಿ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಬಿಇಒ ಮಹೇಶ್, ಎಇಇ ರಾಮಕೃಷ್ಣೇಗೌಡ, ತಾಲೂಕು ಒಕ್ಕಲಿಗರ ಸಂಘ ಹಾಗೂ ಪುರಸಭೆ ಅಧ್ಯಕ್ಷ ಎಂ.ಎಲ್.ದಿನೇಶ್, ಸದಸ್ಯ ಎಸ್.ಎನ್.ದಯಾನಂದ್, ಮುಖಂಡರಾದ ಕೂಡಲಕುಪ್ಪೆ ಕೆ.ಜೆ.ರವಿಶಂಕರ್, ಯತೀಶ್, ಗೌಡಹಳ್ಳಿ ದೇವರಾಜು, ಮರಳಗಾಲ ಗುರು, ಪೈ.ಮುಕುಂದ, ನಗುವನಹಳ್ಳಿ ಶಿವಸ್ವಾಮಿ, ವಕೀಲ ಸಿ.ಎಸ್.ವೆಂಕಟೇಶ್ ಉಪಸ್ಥಿತರಿದ್ದರು.