ಶಿವಮೊಗ್ಗ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳು ದಾಖಲಾದ 60 ದಿನದೊಳಗೆ ಚಾರ್ಜ್‌ಶೀಟ್ ಸಲ್ಲಿಕೆ ಆಗದಿರುವ ಪ್ರಕರಣಗಳನ್ನು ಗುರುತಿಸಿ ಸಭೆಗೆ ಮಂಡಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ (ದೌರ್ಜನ್ಯ ಪ್ರತಿಬಂಧ) ಸಮಿತಿ ಸಭೆ ನಡೆಸಿದ ಅವರು, ಈಗಾಗಲೆ ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂತ್ರಸ್ತರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಬೇಕಾದ ಪರಿಹಾರಧನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ದಾಖಲಾಗುತ್ತಿರುವ ದೌರ್ಜನ್ಯ ಪ್ರಕರಣಗಳ ಕುರಿತು ಪ್ರತಿ ತಿಂಗಳು ಸಭೆಯಲ್ಲಿ ಚರ್ಚಿಸುವ ಅಗತ್ಯವಿದೆ. ಜಿಲ್ಲಾದ್ಯಂತ ಕಂಡುಬರುವ ಬಾಲ್ಯವಿವಾಹ ಪ್ರಕರಣಗಳ ನಿಯಂತ್ರಣಕ್ಕಾಗಿ ಇಲಾಖೆಗಳಿಂದ ಅನೇಕ ಜನಜಾಗೃತಿ ಕಾರ್ಯಕ್ರಮ ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮಗಳ ಉಸ್ತುವಾರಿ ಹಾಗೂ ಬಾಲ್ಯವಿವಾಹಗಳ ನಿಯಂತ್ರಿಸುವಲ್ಲಿ ಜಿಲ್ಲಾಮಟ್ಟದ ವಿವಿಧ ಇಲಾಖಾ ಅಧಿಕಾರಿಗಳಿಗೆ ಹೊಣೆಗಾರಿಕೆ ನೀಡಲಾಗಿದೆ. ಗುರುತಿಸಲಾಗುತ್ತಿರುವ ಬಾಲಗರ್ಭಿಣಿಯರಲ್ಲೂ ಪರಿಶಿಷ್ಟ ಜಾತಿ ಜನಾಂಗದವರೆ ಹೆಚ್ಚಾಗಿರುವುದು ಅತ್ಯಂತ ನೋವಿನ ಸಂಗತಿ. ಈ ವಿಷಯದಲ್ಲಿ ಸಂಬಂಧಿಸಿದ ಸಮುದಾಯದ ಮುಖಂಡರು ವಿಶೇಷ ಗಮನಹರಿಸುವಂತೆ ಸೂಚಿಸಿದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ, ಜಾಗೃತಿ ಸಮಿತಿ ಸದಸ್ಯರಾದ ಶಿವಬಸಪ್ಪ, ಎಚ್.ರುದ್ರಪ್ಪ, ಬಸವರಾಜು ಡಿ ಬೂದಿಗೆರೆ, ಎಂ.ಮಂಜುನಾಥ್, ಎಂ.ಅಣ್ಣಪ್ಪ, ನಾಗರಾಜ, ಓಂಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಾಗೃತಿ ಸಮಿತಿಗೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಗುರುತಿನ ಚೀಟಿ ವಿತರಿಸಿದರು.
ಶೇ.3ರಷ್ಟು ಪ್ರಕರಣಗಳಲ್ಲಿ ಸಾಕ್ಷಾೃಧಾರ ರುಜುವಾತು !
ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ದೌರ್ಜನ್ಯ ಪ್ರಕರಣಗಳನ್ನು ಅವಧಿಪೂರ್ಣಗೊಳ್ಳುವ ಮುನ್ನವೇ ನಿಯಮಾನುಸಾರ ವಿಚಾರಣೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜಾತಿ ನಿಂದನೆಗೆ ಸಂಬಂಧಿಸಿದಂತೆ ದಾಖಲಾಗುವ ಪ್ರಕರಣಗಳಲ್ಲಿ ಅಗತ್ಯ ಸಾಕ್ಷ್ಯಾಧಾರಗಳೊಂದಿಗೆ ರುಜುವಾತಾಗುವ ಪ್ರಕರಣಗಳು ಶೇ.3ರಷ್ಟು ಮಾತ್ರ. ದೂರುದಾರರ ಹೇಳಿಕೆಗಳು, ಸಮರ್ಥನೀಯವಲ್ಲದ ಮತ್ತಿತರ ಕಾರಣಗಳಿಂದ ಪ್ರಕರಣಗಳು ಮುಕ್ತಾಯಗೊಳ್ಳುತ್ತವೆ ಎಂದು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯ ನ್ಯಾಯಾಲಯದಲ್ಲಿ ದಾಖಲಾಗಿರುವ ಪರಿಶಿಷ್ಟರ ಮೇಲಿನ ಒಟ್ಟು ದೌರ್ಜನ್ಯಗಳ ಪೈಕಿ 158 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಜಾತಿನಿಂದನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಆಸಕ್ತರು ಮೊಕದ್ದಮೆಯ ವಿವರಗಳನ್ನು ಮೊಬೈಲ್ ಮೂಲಕ ವೀಕ್ಷಿಸಬಹುದಾಗಿದೆ.
- ಪುಷ್ಪಾ, ಸರ್ಕಾರಿ ಅಭಿಯೋಜಕಿ