ನ್ಯೂಸ್

ರಾಮಮಂದಿರ ಸಂಭ್ರಮಿಸಲು ಅಮೆರಿಕದಲ್ಲೂ ಸಿದ್ಧತೆ; ಪ್ರತಿ ಮನೆಯಲ್ಲಿ ಐದು ದೀಪ

ವಾಷಿಂಗ್ಟನ್: ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಬಗ್ಗೆ ಭಾರತೀಯರು ಮಾತ್ರವಲ್ಲದೆ ಅಮೆರಿಕನ್ನರೂ ಸಂಭ್ರಮಿಸುತ್ತಿದ್ದಾರೆ. ರಾಮಮಂದಿರದ ಉದ್ಘಾಟನೆಯ ಸಂಭ್ರಮಾಚರಣೆಗಾಗಿ ಪ್ರತಿ ಮನೆಯಲ್ಲೂ ಐದು ದೀಪಗಳನ್ನು ಬೆಳಗಿಸಲು ಅಮೆರಿಕದಲ್ಲಿನ ಹಿಂದುಗಳು ನಿರ್ಧರಿಸಿದ್ದಾರೆ. ಅಲ್ಲದೆ ವಿವಿಧ ನಗರಗಳಲ್ಲಿ ಕಾರ್ ರ್ಯಾಲಿಗಳನ್ನು ನಡೆಸುವುದು, ಭವ್ಯ ಉದ್ಘಾಟನಾ ಸಮಾರಂಭವನ್ನು ದೊಡ್ಡ ಪರದೆಗಳಲ್ಲಿ ನೇರಪ್ರಸಾರ ಮಾಡುವುದು, ಸಮುದಾಯ ಸಭೆ ಮತ್ತು ಪಾರ್ಟಿಗಳನ್ನು ಏರ್ಪಡಿಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ವನಿಸಿದ್ದಾರೆ.

ರಾಮಮಂದಿರ ಉದ್ಘಾಟನೆಯ ಐತಿಹಾಸಿಕ ದಿನವನ್ನು ಅಮೆರಿಕದಲ್ಲಿಯೂ ಆಚರಿಸುತ್ತೇವೆ ಎಂದು ಅಮೆರಿಕದ ವಿಶ್ವ ಹಿಂದೂ ಪರಿಷತ್ ಪದಾಧಿಕಾರಿ ಅಮಿತಾಭ್ ಮಿತ್ತಲ್ ಹೇಳಿದ್ದಾರೆ. ಮಹೋತ್ಸವದಲ್ಲಿ ಒಂದು ಸಾವಿರಕ್ಕೂ ಹೆಚ್ಚು ದೇಗುಲಗಳು, ವ್ಯಕ್ತಿಗಳ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸಲಾಗುತ್ತಿದೆ. ಜನರ ಅನುಕೂಲಕ್ಕಾಗಿ https//rammandir2024.org ವೆಬ್​ಸೈಟ್ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ನಮ್ಮೆಲ್ಲರ ಪಾಲಿಗೆ ಇದು ಕನಸಿನ ಮಾತು. ಈ ದಿನವನ್ನು ನೋಡಬಹುದು ಎಂದು ನಮ್ಮ ಜೀವನದಲ್ಲಿ ಎಂದೂ ಯೋಚಿಸಿರಲಿಲ್ಲ. ಈಗ ಸಂಭ್ರಮಿಸುವ ಸಮಯ. ರಾಮಮಂದಿರಕ್ಕಾಗಿ ಅಸಂಖ್ಯಾತ ಜನರು ಹೋರಾಡಿದ್ದಾರೆ. ನಮಗೆ ಶೀಘ್ರದಲ್ಲೇ ಅಯೋಧ್ಯೆಗೆ ಹೋಗಬೇಕು ಅಂತ ಅನಿಸುತ್ತದೆ ಎಂದು ಚಿಕಾಗೋದ ಡಾ. ಭರತ್ ಬರಾಯಿ ಹೇಳಿದ್ದಾರೆ.

ಮುಸ್ಲಿಮರಿಂದ ರಾಮನ ಪ್ರತಿಮೆ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಇಬ್ಬರು ಮುಸ್ಲಿಂ ಶಿಲ್ಪಿಗಳು ಅಯೋಧ್ಯೆ ರಾಮಮಂದಿರದ ಉದ್ಘಾಟನೆ ವೇಳೆ ಸಂಕೀರ್ಣದಲ್ಲಿ ಸ್ಥಾಪಿಸಲು ಭಗವಾನ್ ಶ್ರೀರಾಮನ ಪ್ರತಿಮೆಗಳನ್ನು ರಚಿಸುತ್ತಿದ್ದಾರೆ. ಶಿಲ್ಪಿ ಮೊಹಮ್ಮದ್ ಜಮಾಲುದ್ದೀನ್ ಮತ್ತು ಅವರ ಮಗ ದೇವಸ್ಥಾನದ ಸಂಕೀರ್ಣವನ್ನು ಅಲಂಕರಿಸುವ ಭವ್ಯವಾದ ಪ್ರತಿಮೆಗಳ ರಚನೆಯಲ್ಲಿ ತೊಡಗಿದ್ದಾರೆ.

ಆನ್​ಲೈನ್ ಮೂಲಕ ಈ ತಂದೆ-ಮಗನ ಕೆಲಸ ಗಮನಿಸಿದ ಬಳಿಕ ಅಯೋಧ್ಯೆ ಸಂಕೀರ್ಣಕ್ಕಾಗಿ ರಾಮನ ಪ್ರತಿಮೆಗಳನ್ನು ಮಾಡುವಂತೆ ಸೂಚಿಸಲಾಯಿತು. ‘ಧರ್ಮವು ವೈಯಕ್ತಿಕ ವಿಷಯ, ನಮ್ಮ ದೇಶದಲ್ಲಿ ವಿವಿಧ ಧರ್ಮದ ಜನರಿದ್ದಾರೆ. ನಾವೆಲ್ಲರೂ ಒಟ್ಟಿಗೆ ಬಾಳಲು ಬಯಸು ತ್ತೇವೆ. ರಾಮನ ಪ್ರತಿಮೆ ನಿರ್ವಿುಸಿದಾಗ ತುಂಬಾ ಸಂತೋಷವಾಯಿತು. ಈ ಸಹೋದರತ್ವ ಸಂಸ್ಕೃತಿಯು ಕಲಾವಿದನಾಗಿ ನನ್ನ ಸಂದೇಶವಾಗಿದೆ’ ಎಂದು ಜಮಾಲುದ್ದೀನ್ ಹೇಳಿದ್ದಾರೆ.

ಶ್ರೀರಾಮನ ಪ್ರತಿಷ್ಠಾಪನೆಗಾಗಿ ಮಧ್ಯಪ್ರದೇಶದಿಂದ ಅನೇಕ ಭಕ್ತರು ಅಯೋಧ್ಯೆಗೆ ತೆರಳಲಿದ್ದು, ಆ ಭಕ್ತರ ಹಣೆಗೆ ತಿಲಕವಿಟ್ಟು ಸ್ವಾಗತಿಸಲಾಗುವುದು.

| ಮೋಹನ್ ಯಾದವ್ ಮಧ್ಯಪ್ರದೇಶ ಸಿಎಂ