ನ್ಯೂಸ್

ಪೊಲೀಸ್​ ಠಾಣೆಯಲ್ಲಿ ಕಷಾಯ ತಯಾರಿ..!

ಬೆಂಗಳೂರು: ಭಾರತಿನಗರ ಪೊಲೀಸ್​ ಠಾಣೆಯಲ್ಲೀಗ ಚಕ್ಕೆ, ಲವಂಗ, ಶುಂಠಿ, ಕರಿಮೆಣಸು, ಅಮೃತಬಳ್ಳಿ, ಬೆಳ್ಳುಳ್ಳಿ, ನಿಂಬೆಹಣ್ಣು ಹಾಗೂ ತುಳಸಿಯನ್ನು ನೀರಿಗೆ ಮಿಶ್ರಣ ಮಾಡಿ ಕುದಿಸಲಾಗುತ್ತಿದೆ...

ಸಮಾಜಘಾತುಕರಿಗೆ ಬಿಸಿ ಮುಟ್ಟಿಸುವ ಸ್ಥಳಲ್ಲಿ ಕಷಾಯದ ಪರಿಮಳ ಬರುತ್ತಿದೆ. ಈ ಕಷಾಯವನ್ನು ಬೆಳಗ್ಗೆ ಮತ್ತು ಸಂಜೆ ಸಿಬ್ಬಂದಿಗೆ ವಿತರಿಸಲಾಗುತ್ತದೆ. ಪೂರ್ವ ವಿಭಾಗದ ಡಿಸಿಪಿ ಡಾ.ಎಸ್​.ಡಿ. ಶರಣಪ್ಪ ಅವರೇ ಕಷಾಯ ತಯಾರಿಕೆ ಬೇಕಾದ ಪದಾರ್ಥಗಳ ಖರೀದಿ ವೆಚ್ಚ ಭರಿಸುತ್ತಿದ್ದಾರೆ. ಇದನ್ನೂ ಓದಿರಿ ಎಚ್​.ಡಿ. ಕುಮಾರಸ್ವಾಮಿ ಆಪ್ತಸಹಾಯಕನಿಗೆ ಕರೊನಾ ಪಾಸಿಟಿವ್​

ಕರೊನಾ ಸೋಂಕು ನಗರದ ಖಾಕಿ ಪಡೆಯಲ್ಲಿ ಭೀತಿ ಹುಟ್ಟಿಸಿರುವ ಹೊತ್ತಿನಲ್ಲಿ ಭಾರತಿನಗರ ಠಾಣೆ ಪೊಲೀಸರು ಸ್ವಯಂ ಮದ್ದು ಕಂಡುಕೊಂಡು ಮಾದರಿಯಾಗಿದ್ದಾರೆ.

ಕರೊನಾ ಸೋಂಕು ಹೆಚ್ಚಾದ ಕೂಡಲೇ ಸ್ವಯಂ ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಿದ ಡಿಸಿಪಿ ಶರಣಪ್ಪ, ಠಾಣೆಗಳಲ್ಲೇ ಕಷಾಯ ತಯಾರಿಸಿ ವಿತರಿಸುವಂತೆ ತಮ್ಮ ವಿಭಾಗದ ಎಲ್ಲ ಇನ್​ಸ್ಪೆಕ್ಟರ್​ಗಳಿಗೆ ಸೂಚಿಸಿದ್ದರು. ಒಂದೂವರೆ ತಿಂಗಳಿಂದ ಬೆಳಗ್ಗೆ ಮತ್ತು ಸಂಜೆ 2 ಲೀಟರ್​ ಕಷಾಯ ತಯಾರಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದುವರೆಗೆ ಬೆಂಗಳೂರಿನಲ್ಲಿ 400ಕ್ಕೂ ಹೆಚ್ಚು ಪೊಲೀಸರು ಸೋಂಕಿತರಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಹೆಣ್ಣೂರು, ಶಿವಾಜಿನಗರ ಹಾಗೂ ಕಮರ್ಷಿಯಲ್ ಸ್ಟ್ರೀಟ್​ ಸೇರಿ ಅಕ್ಕಪಕ್ಕದ ಠಾಣೆಗಳಿಗೆ ಸೋಂಕು ಹರಡಿದರೂ ನಮ್ಮ ಠಾಣಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಇದುವರೆಗೆ ಯಾವುದೇ ತೊಂದರೆ ಉಂಟಾಗಿಲ್ಲ ಎಂಬುದು ಭಾರತಿನಗರ ಠಾಣಾ ಸಿಬ್ಬಂದಿ ಖುಷಿಯ ನುಡಿ.