ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.
ವಿದೇಶಿ ವಸ್ತು ಸ್ವದೇಶದಲ್ಲೇ ತಯಾರಿಸಿ!
ಚೀನಾ ಮತ್ತಿತರ ದೇಶಗಳಿಂದ ಬರುತ್ತಿದ್ದ ವಸ್ತುಗಳನ್ನು ಇನ್ನು ಮುಂದೆ ಭಾರತದಲ್ಲಿಯೇ ತಯಾರಿಸುವ ಬಗ್ಗೆ ಹೆಚ್ಚಿನ ಜ್ಞಾನ ಪಡೆದು, ಆ ವಸ್ತುಗಳ ಉತ್ಪಾದನೆಯ ಕೈಗಾರಿಕೆಗಳನ್ನು ತೆರೆಯುವುದು ಸದ್ಯಕ್ಕಿರುವ ಉತ್ತಮ ಆಯ್ಕೆ. ಏಕೆಂದರೆ 2021-22ರಲ್ಲಿ ದೇಶಿ ಕೈಗಾರಿಕೆಗಳಿಗೆ ಹೆಚ್ಚಿನ ಅವಕಾಶ ಸಿಗುವ ನಿರೀಕ್ಷೆಯಿದೆ. ಆತ್ಮನಿರ್ಭರ ಭಾರತ ಪರಿಕಲ್ಪನೆಯಿಂದಾಗಿ ವಿದೇಶಗಳಿಂದ ಆಮದಾಗುತ್ತಿದ್ದ ವಸ್ತುಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇದು ದೇಶಿ ಕೈಗಾರಿಕೆಗಳ ಉತ್ಪಾದನೆ ಹೆಚ್ಚಲು ಸಹಕಾರಿಯಾಗಲಿದೆ. ಅದರ ಜತೆಗೆ ಕೆಲವು ತಿಂಗಳಿನಿಂದ ಸ್ಥಗಿತಗೊಂಡಿದ್ದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ 2021ರ ಏಪ್ರಿಲ್ನಿಂದ ಹೊಸ ಚೈತನ್ಯ ಬರಲಿದೆ. ಆಸಕ್ತಿ ಇರುವವರು ಆದರಲ್ಲಿಯೂ ಪ್ರಯತ್ನಿಸಬಹುದು. ಸಣ್ಣ ಮತ್ತು ಮಧ್ಯಮ ಕೈಗಾರಿಕೆ ವಲಯದಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಉದ್ಯಮ ಆರಿಸಿಕೊಂಡರೆ ಆರ್ಥಿಕಾಭಿವೃದ್ಧಿಗೆ ಹೆಚ್ಚು ಅವಕಾಶವಿದೆ. ವಿವಿಧ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳ ಪೂರೈಕೆಯ ಆಯ್ಕೆಯೂ ಲಾಭದಾಯಕವೇ. 2030ರ ವೇಳೆಗೆ ಬೆಂಗಳೂರಿನ ಜನಸಂಖ್ಯೆ 2.3 ಕೋಟಿಯಾಗಲಿದೆ. ಅದರಿಂದಾಗಿ 10 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಕನಿಷ್ಠ 90 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ.
| ಪೆರಿಕಲ್ ಎಂ. ಸುಂದರ್ ಅಧ್ಯಕ್ಷ, ಎಫ್ಕೆಸಿಸಿಐ