ಕೆ.ಆರ್.ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ರೈತ ಮುಖಂಡರು ಮತ್ತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಡಿ.ರವಿಶಂಕರ್ ಮಾತನಾಡಿದರು. ಜಿ.ಸುರೇಂದ್ರಮೂರ್ತಿ, ಎಸ್.ನರಗುಂದ್, ಕುಲದೀಪ್, ಎಂ.ಎಸ್.ಮಹದೇವ್, ಶಂಕರ್‌ಸ್ವಾಮಿ, ನರಸಿಂಹರಾಜು ಇದ್ದರು. 
ನ್ಯೂಸ್

ಬಿತ್ತನೆ ಬೀಜ, ರಸಗೊಬ್ಬರ ವಿತರಿಸಲು ಸಿದ್ಧತೆ ಮಾಡಿಕೊಳ್ಳಿ

ಕೆ.ಆರ್.ನಗರ: ಮುಂಗಾರು ಆರಂಭಕ್ಕೂ ಮುನ್ನ ಉತ್ತಮ ಮಳೆಯಾಗಿದ್ದು ರೈತರು ಸಕಾಲದಲ್ಲಿ ಬಿತ್ತನೆ ಮಾಡಲು ಅನುಕೂಲವಾಗಿದೆ. ಆದ್ದರಿಂದ ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಬೇಕಾಗುವ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ ಸಂಬಂಧ ಆಯೋಜಿಸಿದ್ದ ರೈತ ಮುಖಂಡರು ಮತ್ತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಹೈಬ್ರಿಡ್ ಭತ್ತ ಬೆಳೆಯಲು ಹೆಚ್ಚು ಆಸಕ್ತಿ ತೋರುತ್ತಿದ್ದು, ಆ ಬಿತ್ತನೆ ಬೀಜಗಳನ್ನು ವಿತರಿಸಲು ಕ್ರಮ ವಹಿಸಲಾಗುವುದು ಎಂದರು.

ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗೆ ಬೇಕಾಗುವ ಪರಿಕರಗಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕಾದದ್ದು ಕೃಷಿ ಇಲಾಖೆ ಅಧಿಕಾರಿಗಳ ಜವಬ್ದಾರಿಯಾಗಿದ್ದು, ಈ ವಿಚಾರವನ್ನು ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸರ್ಕಾರದ ನಿಯಮಾನುಸಾರ ಬೀತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡಲು ಅಂಗಡಿ ಮಾಲೀಕರಿಗೆ ಸೂಚನೆ ನೀಡಬೇಕು ಎಂದು ಸಲಹೆ ನೀಡಿದರು.

ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕ್ರಮ: ನಿಯಮ ಮೀರಿ ಹೆಚ್ಚು ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದು ಕಂಡುಬಂದಲ್ಲಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಶಾಸಕರು, ಎಲ್ಲ ಇಲಾಖಾಧಿಕಾರಿಗಳು, ರೈತರು ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದರೊಂದಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಸಮಪರ್ಕವಾದ ಮಾಹಿತಿ ನೀಡಿ ಅವರಿಗೆ ಅನುಕೂಲ ಕಲ್ಪಿಸಬೇಕು ಎಂದು ತಾಕೀತು ಮಾಡಿದರು.

ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಸಾಕಷ್ಟು ಉಪಯುಕ್ತವಾದ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದ್ದರೂ ಅವುಗಳನ್ನು ಸಮಪರ್ಕವಾಗಿ ಪ್ರಚಾರ ಪಡಿಸಿ ಎಲ್ಲ ರೈತರಿಗೂ ಅನುಕೂಲ ಮಾಡುವ ಕೆಲಸವನ್ನು ಇಲಾಖೆ ಅಧಿಕಾರಿಗಳು ಮಾಡುತ್ತಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿವೆ. ಹಾಗಾಗಿ ತೋಟಗಾರಿಕೆ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ಕೊಟ್ಟು ತೋಟಗಾರಿಕೆ ಮಾಡುತ್ತಿರುವ ರೈತರನ್ನು ಗುರುತಿಸಿ ಸವಲತ್ತು ತಲುಪಿಸಬೇಕು ಎಂದು ಎಚ್ಚರಕೆ ನೀಡಿದರು.

ತಹಸೀಲ್ದಾರರಾದ ಜಿ.ಸುರೇಂದ್ರಮೂರ್ತಿ, ಎಸ್.ನರಗುಂದ್, ತಾಪಂ ಇಒ ಕುಲದೀಪ್, ಕೃಷಿ ಇಲಾಖೆಯ ಸಹಕಾರ ನಿರ್ದೇಶಕ ಕೆ.ಜೆ.ಮಲ್ಲಿಕಾರ್ಜುನ್, ಸೆಸ್ಕ್ ಎಇಇ ಅರ್ಕೇಶ್‌ಮೂರ್ತಿ, ಜಿಪಂ ಮಾಜಿ ಸದಸ್ಯರಾದ ಮಾರ್ಚಳಹಳ್ಳಿ ಶಿವರಾಮು, ಜಯರಾಮೇಗೌಡ, ಪುರಸಭಾ ಸದಸ್ಯರಾದ ಕೋಳಿಪ್ರಕಾಶ್, ಶಂಕರ್‌ಸ್ವಾಮಿ, ಮಾಜಿ ಅಧ್ಯಕ್ಷ ನರಸಿಂಹರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್ ಜಬೀರ್ ಇನ್ನಿತರರು ಇದ್ದರು.