ನ್ಯೂಸ್

ಸರ್ಕಾರಿ ಕಾಲೇಜು ಸಿಇಟಿ ವಿದ್ಯಾರ್ಥಿಗಳಿಗೆ 2 ಪ್ರಿಪ್ರೆಟರಿ: ಹೇಗೆ ನಡೆಯಲಿದೆ ಪರೀಕ್ಷೆ, ಇದರ ಲಾಭವೇನು?

ಬೆಂಗಳೂರು: ವಿದ್ಯಾರ್ಥಿಗಳು ಸಿಇಟಿ ಒಎಂಆರ್‌ನಲ್ಲಿ ಮಾಡುವ ತಪ್ಪುಗಳನ್ನು ತಿದ್ದಿಕೊಳ್ಳಲು ಅನುಕೂಲ ಮಾಡಿಕೊಡುವುದು ಮತ್ತು ಪರೀಕ್ಷೆಗೆ ಅಣಕು ತರಬೇತಿ ಮಾಡುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೇ ಮೊದಲ ಬಾರಿಗೆ ರಾಜ್ಯದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಎರಡು ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸುತ್ತಿದೆ.

ಈ ಸಂಬಂಧ ಪರೀಕ್ಷಾ ಪ್ರಾಧಿಕಾರದ ವತಿಯಿಂದಲೇ ಒಎಂಆರ್ ಶೀಟ್‌ಗಳನ್ನು ಕಳುಹಿಸಿಕೊಡುತ್ತಿದೆ. ಕಾಲೇಜುಗಳಿಗೆ ಅನುಕೂಲವಾದ ಸಮಯದಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಎರಡು ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಬಹುದಾಗಿದೆ. ಮೌಲ್ಯಮಾಪನವನ್ನು ಕೂಡ ಕಾಲೇಜು ಹಂತದಲ್ಲಿಯೇ ನಡೆಯಲಿದ್ದು, ಪರೀಕ್ಷೆ ಬಳಿಕ ಚಿಂತನ ಮಂಥನ ಮಾಡಿಕೊಳ್ಳಲು ಅನುಕೂಲವಾಗಲಿದೆ.

ಸಾಮಾನ್ಯವಾಗಿ ಶೇ.10ರಿಂದ 15ರಷ್ಟು ವಿದ್ಯಾರ್ಥಿಗಳು ಒಎಂಆರ್ ಭರ್ತಿ ಮಾಡುವ ವೇಳೆ ಒಂದಲ್ಲಾ ಒಂದು ತಪ್ಪನ್ನು ಮಾಡುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ನಷ್ಟವಾಗಲಿದೆ. ಈ ತಪ್ಪನ್ನು ತಿದ್ದಿಕೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಾಧಿಕಾರದ ವತಿಯಿಂದಲೇ ಒಎಂಆರ್ ಕಳುಹಿಸಿಕೊಟ್ಟು ತರಬೇತಿ ನೀಡಲಾಗುತ್ತಿದೆ ಎಂದು ಕೆಒಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದರು.

ಪರೀಕ್ಷೆ ಬರೆದ ವೇಳೆ ಮಕ್ಕಳು ಮಾಡುವ ತಪ್ಪುಗಳನ್ನು ಕಾಲೇಜು ಹಂತದಲ್ಲಿಯೇ ತಿದ್ದಿಕೊಂಡರೆ ಮುಖ್ಯ ಪರೀಕ್ಷೆಯಲ್ಲಿ ಸರಿಪಡಿಸಿಕೊಳ್ಳಬಹುದು. ಈ ಸಂಬಂಧ ಭೌತಶಾಸ, ರಾಸಾಯನಶಾಸ, ಜೀವಶಾಸ ಮತ್ತು ಗಣಿತ ವಿಷಯದ ತಲಾ ಎರಡರಂತೆ ಒಬ್ಬ ವಿದ್ಯಾರ್ಥಿಗೆ ಒಟ್ಟು ಎಂಟು ಒಎಂಆರ್ ಶೀಟ್‌ಗಳನ್ನು ಕಾಲೇಜುಗಳಿಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಹೇಳಿದರು.

ಮಾ.1ರಿಂದ 20ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಸಿಇಟಿ ಪರೀಕ್ಷೆಯು ಏ.16 ಮತ್ತು 17ರಂದು ನಡೆಯಲಿದೆ. ಈ ನಡುವೆ ಸುಮಾರು 25 ದಿನಗಳು ಲಭ್ಯವಾಗಲಿವೆ. ಈ ಅವಧಿಯಲ್ಲಿ ಎರಡು ಪರೀಕ್ಷೆಗಳನ್ನು ನಡೆಸಿದರೆ, ವಿದ್ಯಾರ್ಥಿಗಳು ಪರೀಕ್ಷೆಗೆ ಹೆಚ್ಚು ಗಮನ ನೀಡಲು ಸಹಕಾರಿಯಾಗಲಿದೆ.

ಸರ್ಕಾರಿ ಕಾಲೇಜು ಮತ್ತು ಗ್ರಾಮೀಣ ಭಾಗದ ಮಕ್ಕಳು ಶೈಕ್ಷಣಿಕವಾಗಿ ಜಾಣರಾಗಿದ್ದರೂ ಪರೀಕ್ಷೆಯಲ್ಲಿ ತಾಂತ್ರಿಕವಾಗಿ ಮಾಡುವ ಕೆಲವು ಎಡವಟ್ಟುಗಳಿಂದ ಅಂಕಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಈ ಎಲ್ಲ ಕಾರಣಗಳಿಂದ ಮುಂದಾಲೋಚನೆ ಮಾಡಿ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ.

ಸಾಮಾನ್ಯವಾಗಿ ಶೇ.10ರಿಂದ 15ರಷ್ಟು ವಿದ್ಯಾರ್ಥಿಗಳು ಒಎಂಆರ್ ಶೀಟ್‌ನಲ್ಲಿ ತಪ್ಪುಗಳನ್ನು ಮಾಡುತ್ತಾರೆ. ಕಾಲೇಜು ಹಂತದಲ್ಲಿಯೇ ಎರಡು ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸುವುದರಿಂದ ಅಂತಹ ತಪ್ಪುಗಳನ್ನು ತಡೆಗಟ್ಟಲು ಸಹಕಾರಿಯಾಗಲಿದೆ. - ಎಚ್. ಪ್ರಸನ್ನ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ