ಕೋಲಾರ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಮಾತನಾಡಿದರು. ಎಡಿಸಿ ಮಂಗಳಾ ಇದ್ದರು. 
ನ್ಯೂಸ್

ವೇಮಗಲ್​-ಕುರುಗಲ್​ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಿದ್ಧತೆ

ಕೋಲಾರ: ಜಿಲ್ಲೆಯ ವೇಮಗಲ್​-ಕುರುಗಲ್​ ಪಟ್ಟಣ ಪಂಚಾಯಿತಿಯ ಚುನಾವಣೆ ಪ್ರಕ್ರಿಯೆ ಶುರುವಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಪಾರದರ್ಶಕವಾಗಿ ಚುನಾವಣೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆದ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು, ಚುನಾವಣೆ ನಿರ್ವಹಣೆಗೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಆ.5ರಂದು ನಾಮಪತ್ರ ಸಲ್ಲಿಕೆ ಕೊನೆಯ ದಿನವಾಗಿದೆ. ಆ.6ರಂದು ನಾಮಪತ್ರಗಳ ಪರಿಶೀಲನೆ, ಆ.8ರಂದು ಉಮೇದುವರಿಕೆ ಹಿಂತೆಗೆದುಕೊಳ್ಳಲು ಕೊನೇ ದಿನವಾಗಿರುತ್ತದೆ. ಆ.17ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ಆ.20ರಂದು ನಗರದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳಾ, ತಹಸೀಲ್ದಾರ್​ ಡಾ.ಎಂ.ನಯನಾ, ಮೀನುಗಾರಿಕೆ ಉಪ ನಿರ್ದೇಶಕ ರಾಜಣ್ಣ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬೈರೇಗೌಡ, ಸಹಾಯಕ ಕೃಷಿ ನಿರ್ದೇಶಕ ಮುರಳಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ.ಶಿವಾರೆಡ್ಡಿ ಇದ್ದರು.

*ಉಲ್ಲಂಘಿಸಿದರೆ ಕ್ರಮ

ನೀತಿ ಸಂಹಿತೆ ಉಲ್ಲಂನೆ ತಡೆಯಲು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಸರ್ಕಾರಿ ಅಧಿಕಾರಿಗಳು, ನೌಕರರು ಪಾಲಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 17 ವಾರ್ಡ್​ಗಳಿದ್ದು, ಇಬ್ಬರು ಚುನಾವಣಾಧಿಕಾರಿಗಳನ್ನು ಮತ್ತು ಇಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಒಟ್ಟು 22 ಮತಗಟ್ಟೆಗಳಿದ್ದು, ಅದರಲ್ಲಿ 6,555 ಪುರುಷ ಮತದಾರರು, 6,939 ಮಹಿಳಾ ಮತದಾರರು ಸೇರಿ ಒಟ್ಟು 13,494 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು. ಮತದಾನಕ್ಕಾಗಿ ರಾಜ್ಯ ಚುನಾವಣಾ ಆಯೋಗದ ವಿದ್ಯುನ್ಮಾನ ಮತಯಂತ್ರಗಳನ್ನು ಬಳಕೆ ಮಾಡಲಾಗುತ್ತಿದ್ದು, ಸ್ಥಳಿಯ ಸಂಸ್ಥೆಗಳ ಚುನಾವಣೆಗೂ ಸಹ ಮತಪತ್ರದಲ್ಲಿ ನೋಟಾ ಎಂದು ಮುದ್ರಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ ಮುದ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

* ಅಕ್ರಮ ತಡೆಗೆ ಕಂಟ್ರೋಲ್​ ರೂಂ ಸ್ಥಾಪನೆ

ಪಟ್ಟಣ ಪಂಚಾಯಿತಿ ಚುನಾವಣೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ದೂರು ಸ್ವೀಕರಿಸಲು ಕಂಟ್ರೋಲ್​ ರೂಂ ಸ್ಥಾಪಿಸಿದ್ದು, ವೇಮಗಲ್​ 08152-243506 ಹಾಗೂ ತಾಲೂಕು ಕಚೇರಿಯ ಸಂಖ್ಯೆ 08152-222056 ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ತಿಳಿಸಿದರು. ವೇಳಾಪಟ್ಟಿಯಂತೆ ಶಾಂತಿ ಮತ್ತು ಸುವ್ಯವಸ್ಥೆಯಿಂದ ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಸಾರ್ವಜನಿಕರು ಸಹಕಾರ ನೀಡುಬೇಕು ಎಂದು ಕೋರಿದರು.