ಸಾಗರದ ಸಾಮರ್ಥ್ಯಸೌಧದಲ್ಲಿ ಉಪವಿಭಾಗಾಧಿಕಾರಿ ಆರ್.ಯತೀಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಎಚ್.ಕೆ.ನಾಗಪ್ಪ, ಚಂದ್ರಶೇಖರ್ ಇದ್ದರು. 
ನ್ಯೂಸ್

ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಸಿದ್ಧತೆ

ಸಾಗರ: ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ನಡೆಸಿದ್ದು, ಸುವರ್ಣ ಕರ್ನಾಟಕ ಸಂಭ್ರಮದ ಆಚರಣೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಾಗರ ಉಪವಿಭಾಗಾಧಿಕಾರಿ ಆರ್.ಯತೀಶ್ ಹೇಳಿದರು.

ನಗರದ ಸಾಮರ್ಥ್ಯಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ರಾಜ್ಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕರ್ನಾಟಕ ಎಂದು ನಾಮಕರಣಗೊಂಡು ಐವತ್ತು ವರ್ಷ ಆಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವೈಭವದಿಂದ ನಡೆಸಲು ಸೂಚಿಸಿದ್ದು, ಸಾಗರದಲ್ಲಿ ರಸ್ತೆಗಳಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಬೇಕು. ವಿವಿಧ ವೃತ್ತಗಳಲ್ಲಿ ಅಲಂಕಾರ ಮಾಡುವ ಜತೆಗೆ ಕೆಳದಿಯಿಂದ ಬರುವ ಕನ್ನಡ ಜ್ಯೋತಿ ಸ್ವಾಗತಕ್ಕೆ ವಿಶೇಷ ಒತ್ತು ನೀಡಬೇಕು ಎಂದು ತಿಳಿಸಿದರು.

ನೆಹರು ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಗುವುದು. ಕೆಳದಿ ರಾಣಿ ಚನ್ನಮ್ಮಾಜಿ ವೃತ್ತದಲ್ಲಿ ಕನ್ನಡ ಜ್ಯೋತಿ ಸ್ವಾಗತಿಸಿ, ಕನ್ನಡ ಧ್ವಜಾರೋಹಣವನ್ನು ಶಾಸಕರು ನೆರವೇರಿಸುವರು. ದೀಪಾವಳಿ ಹಬ್ಬ ಇರುವುದರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು 2-3 ದಿನದ ನಂತರ ನಡೆಸಲಾಗುವುದು ಎಂದರು. ಪೌರಾಯುಕ್ತ ಎಚ್.ಕೆ.ನಾಗಪ್ಪ, ಕೆಳದಿ ರಾಮೇಶ್ವರ ದೇವಸ್ಥಾನ ಸಮಿತಿಯ ಉಮೇಶ್ ಬಂದಗದ್ದೆ, ತಹಸೀಲ್ದಾರ್-2 ಚಂದ್ರಶೇಖರ್ ಹಾಜರಿದ್ದರು.